ರಾಮನಾಥಪುರ, ಜು. 5: ಹಾಸನ ತಾಲ್ಲೂಕಿನ ಕಟ್ಟಾಯ ಗ್ರಾಮದಲ್ಲಿ ಶ್ರೀ ಮಾಸ್ತಮ್ಮ ಹಾಗೂ ಪರಿವಾರ ದೇವರ ನೂತನ ದೇವಸ್ಥಾನದ ಉದ್ಘಾಟನಾ ಹಾಗೂ ಹೋಮ-ಹವನ ಪೂಜಾ ಕಾರ್ಯಕ್ರಮಗಳು ಜುಲೈ 4 ಮತ್ತು 5ರಂದು ಭಕ್ತಿ-ಶ್ರದ್ಧೆಯಿಂದ ಹಾಗೂ ವೈಭವದಿಂದ ಜರುಗಿದವು.
ಕಾರ್ಯಕ್ರಮದ ಅಂಗವಾಗಿ ಅರ್ಚಕರಾದ ಉದ್ದೂರು ಕೀರಣ್, ಮಲ್ಲಿಕಾರ್ಜುನ ಹಾಗೂ ಅವರ ತಂಡದವರು ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಮೊದಲ ದಿನ ಗ್ರಾಮದ ಮಹಿಳೆಯರು ಊರ ಮುಂಭಾಗದ ಕಾಟಿಕೆರೆಯಿಂದ ಕಳಸ ಕುಂಭಗಳನ್ನು ಹೊತ್ತು, ಪೂಜೆ ಸಲ್ಲಿಸಿ, ಪಟಾಕಿ ಸಿಡಿಸಿ, ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದರು. ಬಳಿಕ ಹೋಮ-ಹವನ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಎರಡನೇ ದಿನ ಬೆಳಿಗ್ಗೆ ಶ್ರೀ ಮಾಸ್ತಮ್ಮ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಹೋಮ-ಹವನ ನೆರವೇರಿಸಿದ ನಂತರ ನೂತನ ದೇವಸ್ಥಾನವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಎರಡು ದಿನಗಳ ಕಾಲ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಗ್ರಾಮದ ಮುಖಂಡರು, ದಾನಿಗಳು, ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ದೇವಾಲಯದ ವಿಶೇಷ ಸಂಪ್ರದಾಯವೆಂದರೆ, ಗ್ರಾಮದಲ್ಲಿ ಜನಿಸಿದ ಹೆಣ್ಣುಮಕ್ಕಳು ಪೂಜಾ ವಿಧಿಗಳಲ್ಲಿ ಭಾಗವಹಿಸುವುದಿಲ್ಲ. ಬದಲಾಗಿ ಗ್ರಾಮಕ್ಕೆ ಮದುವೆಯಾಗಿ ಬಂದ ಸೊಸೆಯಂದಿರೇ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಾರೆ. ಈ ಸಂಪ್ರದಾಯವು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಮಾಳದ ಹಬ್ಬದ ಸಂದರ್ಭದಲ್ಲಿ ಹೊಸ ಬಟ್ಟೆ ಸಮರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೆ, ಇಲ್ಲಿ ಯಾವುದೇ ವಿಗ್ರಹಗಳಿಲ್ಲದೆ ಕಲ್ಲಿನ ರೂಪದಲ್ಲೇ ದೇವರುಗಳನ್ನು ಆರಾಧಿಸಲಾಗುವುದು ಎಂಬುದು ಈ ಕ್ಷೇತ್ರದ ಮತ್ತೊಂದು ವಿಶೇಷತೆಯಾಗಿದೆ.
– ಕುಮಾರಸ್ವಾಮಿ ಎಂ.ಎನ್.
