ಕೊರಟಗೆರೆ : – ತಾಲೂಕಿನ ಕೋಳಾಲ ಹೋಬಳಿಯ ಗೊರವನಹಳ್ಳಿ ಸಮೀಪದ ತೀತಾ ಜಲಾಶಯದಲ್ಲಿ ಬೋಟಿಂಗ್ ಯೋಜನೆಯ ಕಾಮಗಾರಿ ಆರಂಭವಾಗಿದ್ದು, ಟೆಂಡರ್ ಅನ್ನು ಸ್ಥಳೀಯರಿಗೆ ನೀಡದೆ ಹೊರಜಿಲ್ಲೆಯ ಖಾಸಗಿ ವ್ಯಕ್ತಿಗೆ ನೀಡಲಾಗಿದೆ ಎಂದು ಆರೋಪಿಸಿ ಗೊರವನಹಳ್ಳಿ, ತೀತಾ ಹಾಗೂ ಕೆಂಗನಪಾಳ್ಯದ ರೈತರು ಮತ್ತು ಯುವಕರು ಭಾನುವಾರ ಆಕ್ರೋಶ ವ್ಯಕ್ತಪಡಿಸಿ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು.
ಹೇಮಾವತಿ ನಾಲಾ ವಲಯ, ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದ ಅನುಮತಿಯೊಂದಿಗೆ ಖಾಸಗಿ ಸಂಸ್ಥೆ ಬೋಟಿಂಗ್ ಕಾಮಗಾರಿ ಆರಂಭಿಸಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿ ಸ್ಥಳೀಯರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸ್ಥಳೀಯ ರೈತರ ಪ್ರಕಾರ, ತೀತಾ ಜಲಾಶಯ ನಿರ್ಮಾಣಕ್ಕಾಗಿ ಅಕ್ಕಪಕ್ಕದ ಗ್ರಾಮಗಳ ನೂರಾರು ರೈತರು ತಮ್ಮ ಜಮೀನು ಕಳೆದುಕೊಂಡಿದ್ದಾರೆ.
ಆದರೆ ಜಲಾಶಯದಲ್ಲಿ ಆರಂಭವಾಗುತ್ತಿರುವ ಬೋಟಿಂಗ್ ಯೋಜನೆಯ ಟೆಂಡರ್ ಕುರಿತು ಸ್ಥಳೀಯರಿಗೆ ಯಾವುದೇ ಮಾಹಿತಿ ನೀಡಲಾಗಿಲ್ಲ. ಸ್ಥಳೀಯ ನಿರುದ್ಯೋಗಿ ಯುವಕರಿಗೆ ಗುತ್ತಿಗೆ ನೀಡಿದ್ದರೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತಿತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗುತ್ತಿಗೆದಾರರು,
ಪ್ರವಾಸೋದ್ಯಮ ಇಲಾಖೆಯ ನಿಯಮಾನುಸಾರ ಟೆಂಡರ್ ಪಡೆದು ಸರ್ಕಾರಕ್ಕೆ ನಿಗದಿತ ಮೊತ್ತ ಪಾವತಿಸಿದ್ದು, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಬೋಟಿಂಗ್ ಚಾಲಕರು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಸ್ಥಳೀಯರಿಗೆ ಉದ್ಯೋಗ ನೀಡಲು ಸಿದ್ಧವಿದ್ದೇವೆ ಎಂದು ತಿಳಿಸಿದರು.
ಈ ನಡುವೆ ತುಮಕೂರು ಹೇಮಾವತಿ ನಾಲಾ ವಲಯದ ಎಇಇ ಪದ್ಮಶ್ರೀ ಹಾಗೂ ಎಇ ನವೀನ್ ಕುಮಾರ್ ತೀತಾ ಜಲಾಶಯಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಸ್ಥಳೀಯರು ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಿದ ಬಳಿಕ ವಿಷಯವನ್ನು ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಧಿಕಾರಿ ಸಮಿತಿಯ ಗಮನಕ್ಕೆ ಪತ್ರದ ಮೂಲಕ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೀತಾ ಜಲಾಶಯದಲ್ಲಿ ಬೋಟಿಂಗ್ ನಡೆಸಲು ನಾನು ಕೂಡ ಟೆಂಡರ್ಗೆ ಅರ್ಜಿ ಸಲ್ಲಿಸಿದ್ದೆ. ಆದರೆ ನಮಗೆ ಯಾವುದೇ ಮಾಹಿತಿ ನೀಡದೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಜಲಾಶಯ ನಿರ್ಮಾಣಕ್ಕಾಗಿ ನಮ್ಮ ಜಮೀನು ಭೂಸ್ವಾಧೀನವಾಗಿದೆ. ಸ್ಥಳೀಯ ನಿರುದ್ಯೋಗಿ ಯುವಕರಿಗೆ ಜಿಲ್ಲಾಡಳಿತವೇ ಟೆಂಡರ್ ನೀಡಿ ಉದ್ಯೋಗ ಕಲ್ಪಿಸಬೇಕು.
ರವಿಕುಮಾರ್, ಸ್ಥಳೀಯ ರೈತ, ಕೆಂಗನಪಾಳ್ಯ..
ಪ್ರವಾಸೋದ್ಯಮ ಇಲಾಖೆಯ ನಿಯಮಾನುಸಾರ ಟೆಂಡರ್ ಪಡೆದು ಕಾಮಗಾರಿ ಆರಂಭಿಸಿದ್ದೇವೆ. ಜಿಲ್ಲಾಡಳಿತದ ಸೂಚನೆಯಂತೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಪ್ರವಾಸಿಗರಿಗೆ ಸುರಕ್ಷಿತ ಹಾಗೂ ಅನುಕೂಲಕರ ಸೇವೆ ಒದಗಿಸುವ ಉದ್ದೇಶದಿಂದ ಬೋಟಿಂಗ್ ಸ್ಥಳವನ್ನು ನಿಗದಿಪಡಿಸಲಾಗಿದೆ. ಸ್ಥಳೀಯರಿಗೆ ಉದ್ಯೋಗ ನೀಡಲು ಆದ್ಯತೆ ನೀಡಲಾಗುವುದು.
– ಸ್ವಾಮಿ ಎಸ್., ಟೆಂಡರ್ ಗುತ್ತಿಗೆದಾರ, ತುಮಕೂರು
– ಶ್ರೀನಿವಾಸ್ ಕೊರಟಗೆರೆ
