ಕೊರಟಗೆರೆ, ಜು.9: ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದಲ್ಲಿರುವ ಐತಿಹಾಸಿಕ ಹಾಗೂ ಪ್ರಸಿದ್ಧ ಶ್ರೀ ದೊಡ್ಡಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಭಕ್ತರ ಅನುಕೂಲಕ್ಕಾಗಿ ನಿರ್ಮಿಸಲಾಗುತ್ತಿರುವ ಅನ್ನದಾಸೋಹ ಭವನಕ್ಕೆ ಸಮಾಜಸೇವಕ ಪಿ.ಎನ್. ಕೃಷ್ಣಮೂರ್ತಿ ಹಾಗೂ ಅವರ ಕುಟುಂಬದ ವತಿಯಿಂದ ಭೂಮಿಪೂಜೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಯಿತು.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ದೊಡ್ಡಮ್ಮ ದೇವಿ ಈ ಭಾಗದ ಆರಾಧ್ಯ ಗ್ರಾಮದೇವತೆಯಾಗಿದ್ದು, ಕೊರಟಗೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸುತ್ತಾರೆ. ವಿಶೇಷವಾಗಿ ಜಾತ್ರೆಯ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಸೇರುವ ಹಿನ್ನೆಲೆಯಲ್ಲಿ ಅನ್ನದಾಸೋಹಕ್ಕೆ ಸೂಕ್ತ ವ್ಯವಸ್ಥೆಯ ಅಗತ್ಯತೆ ಕಂಡುಬಂದಿತ್ತು.

ಈ ಹಿಂದೆ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಪಿ.ಎನ್. ಕೃಷ್ಣಮೂರ್ತಿ ಅವರು ಅನ್ನದಾಸೋಹ ನಡೆಯುತ್ತಿದ್ದ ಸ್ಥಳದ ಪರಿಸ್ಥಿತಿಯನ್ನು ಗಮನಿಸಿ, ಭಕ್ತರಿಗೆ ಅನುಕೂಲವಾಗುವಂತೆ ಸುಸಜ್ಜಿತ ಅನ್ನದಾಸೋಹ ಭವನ ನಿರ್ಮಿಸುವ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಅವರು ಇಂದು ಸುಮಾರು 103×75 ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ಅನ್ನದಾಸೋಹ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಅವರು ಬುಕ್ಕಾಪಟ್ಟಣ ಗ್ರಾಮದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೂ ಭೇಟಿ ನೀಡಿ, ಗ್ರಾಮಸ್ಥರ ಮನವಿಯಂತೆ ದೇವಾಲಯದ ಗೋಪುರ ನಿರ್ಮಾಣಕ್ಕೆ ಧನಸಹಾಯ ನೀಡುವುದಾಗಿ ಘೋಷಿಸಿದರು. ಬಳಿಕ ಶ್ರೀ ದೊಡ್ಡಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅನ್ನದಾಸೋಹ ಭವನ ಕಾಮಗಾರಿಗೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಪಿ.ಎನ್. ಕೃಷ್ಣಮೂರ್ತಿ, “ನಮ್ಮ ತಂದೆ-ತಾಯಿಯವರ ಆಶೀರ್ವಾದದಿಂದ ಸಮಾಜಸೇವೆ ಮಾಡುವ ಅವಕಾಶ ದೊರೆತಿದೆ. ಬಡವರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆರು ಹೋಬಳಿಗಳಲ್ಲಿ ಸಮುದಾಯ ಭವನಗಳ ನಿರ್ಮಾಣ ಹಾಗೂ ದೇವಾಲಯಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವುದು ನಮ್ಮ ಕುಟುಂಬದ ಸಂಕಲ್ಪವಾಗಿದೆ. ಕಳೆದ 30 ವರ್ಷಗಳಿಂದ ಜನರ ಪ್ರೀತಿ ಮತ್ತು ವಿಶ್ವಾಸದಿಂದ ಸಮಾಜಸೇವೆಯಲ್ಲಿ ತೊಡಗಿದ್ದು, ಮುಂದೆಯೂ ಜನಸೇವೆಗೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ” ಎಂದು ಹೇಳಿದರು.

ಅನಂತರ ಅವರು ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಅಲ್ಲಿನ ನಿರ್ಮಾಣ ಹಂತದಲ್ಲಿರುವ ಸಮುದಾಯ ಭವನಕ್ಕೆ ಧನಸಹಾಯ ನೀಡುವುದರ ಜೊತೆಗೆ ನೆಲಹಾಸಿಗೆ ಅಗತ್ಯವಾದ ಗ್ರಾನೈಟ್ ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು, ಮಹಿಳೆಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪಿ.ಎನ್. ಕೃಷ್ಣಮೂರ್ತಿ ಅವರ ಸಮಾಜಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಅಂಬರೀಶ್ ಅಭಿಮಾನಿ ಬಳಗದ ಅಧ್ಯಕ್ಷ ಪರಮೇಶ್, ಯತೀಶ್, ಲಂಬುರಾಜಣ್ಣ, ಲಕ್ಷ್ಮೀಶ್, ಲಚ್ಚಿ ರಂಗನಾಥ್, ಗಂಗರಾಜ್, ಕರವೇ ನರಸಿಂಹರಾಜು, ಕೆ.ಜಿ.ಆರ್. ರಮೇಶ್ ಸೇರಿದಂತೆ ಅನೇಕ ಮುಖಂಡರು, ಗ್ರಾಮಸ್ಥರು, ಪೂಜಾರಿಗಳ ಕುಟುಂಬಸ್ಥರು ಹಾಗೂ ಭಕ್ತರು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
