ಹಾಸನ, ಜು.9: ಹಲವು ದಶಕಗಳಿಂದ ಶೋಷಿತರು, ಬಡವರು ಹಾಗೂ ಸಾರ್ವಜನಿಕರ ಪರ ನಿರಂತರ ಹೋರಾಟ ನಡೆಸುತ್ತಾ ಸಮಾಜಮುಖಿ ಸೇವೆಯ ಮೂಲಕ ವಿಶಿಷ್ಟ ಗುರುತನ್ನು ಮೂಡಿಸಿರುವ ಹಿರಿಯ ಸಾಮಾಜಿಕ ಹೋರಾಟಗಾರ ಡಾ. ವೈ.ಎಸ್. ವೀರಭದ್ರಪ್ಪ ಅವರಿಗೆ ಸಾರ್ವಜನಿಕ ಅಭಿನಂದನೆ ಸಲ್ಲಿಸುವ ಹಾಗೂ ಅವರ ಜೀವನಾಧಾರಿತ ‘ಸೇವಾರತ್ನ’ ಕೃತಿಯನ್ನು ಲೋಕಾರ್ಪಣೆ ಮಾಡುವ ಸಮಾರಂಭವನ್ನು ಜುಲೈ 12ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ನಗರದ ಎಂ.ಜಿ. ರಸ್ತೆಯ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ.
ಜಿಲ್ಲಾ ನಾಗರೀಕರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಹಿರಿಯ ನಾಗರಿಕರ ವೇದಿಕೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸಂಜೀವಿನಿ ಸಹಕಾರಿ ಆಸ್ಪತ್ರೆ, ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭೆ ಸೇರಿದಂತೆ ವಿವಿಧ ಸಾಮಾಜಿಕ, ಸಾಹಿತ್ಯ, ಮಹಿಳಾ, ದಲಿತ ಹಾಗೂ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.
ಈ ವಿಷಯವನ್ನು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ, ಹುಡಾ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್ ಹಾಗೂ ಜಿಲ್ಲಾ ಕಸಾಪ ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು ತಿಳಿಸಿದರು.
ಅವರು ಮಾತನಾಡಿ, ಯಾವುದೇ ರಾಜಕೀಯ ಹುದ್ದೆ ಅಥವಾ ಅಧಿಕಾರದ ಆಸೆ ಇಲ್ಲದೆ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಸಾಮಾಜಿಕ ನ್ಯಾಯಕ್ಕಾಗಿ ಜೀವನವನ್ನೇ ಸಮರ್ಪಿಸಿಕೊಂಡಿರುವ ಅಪರೂಪದ ವ್ಯಕ್ತಿತ್ವ ಡಾ. ವೈ.ಎಸ್. ವೀರಭದ್ರಪ್ಪ ಅವರದ್ದು. ಬಡವರು, ಶೋಷಿತರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಸರ್ಕಾರ ಮತ್ತು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ನಿರಂತರ ಹೋರಾಟ ನಡೆಸಿರುವ ಅವರ ಬದುಕು ಇಂದಿನ ಪೀಳಿಗೆಗೆ ಮಾದರಿಯಾಗಿದೆ ಎಂದು ಹೇಳಿದರು.
‘ಸೇವಾರತ್ನ’ ಕೃತಿಯಲ್ಲಿ ಹೋರಾಟದ ಬದುಕಿನ ದಾಖಲೆ
ಡಾ. ವೈ.ಎಸ್. ವೀರಭದ್ರಪ್ಪ ಅವರ ಬಾಲ್ಯ, ಸಾಮಾಜಿಕ ಹೋರಾಟ, ಜನಪರ ಚಳವಳಿಗಳು, ಸಾರ್ವಜನಿಕ ಸೇವೆ ಹಾಗೂ ಅವರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಒಳಗೊಂಡ ‘ಸೇವಾರತ್ನ’ ಕೃತಿಯನ್ನು ಶಿಕ್ಷಕಿ ಹಾಗೂ ಲೇಖಕಿ ಬಿ.ಎಸ್. ವನಜಾಕ್ಷಿ ಬೆಟ್ಟದಾಲೂರು ರಚಿಸಿದ್ದಾರೆ. ಮೂರು ವರ್ಷಗಳ ಕಾಲ ದಾಖಲೆಗಳು, ಸಂದರ್ಶನಗಳು ಹಾಗೂ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಈ ಕೃತಿಯನ್ನು ಸಿದ್ಧಪಡಿಸಲಾಗಿದೆ. ಇದು ಕೇವಲ ಜೀವನಚರಿತ್ರೆಯಲ್ಲ, ಸಮಾಜ ಸೇವೆಯಲ್ಲಿ ತೊಡಗುವವರಿಗೆ ಸ್ಫೂರ್ತಿ ನೀಡುವ ಮಹತ್ವದ ದಾಖಲೆಯಾಗಿದೆ ಎಂದು ಆಯೋಜಕರು ತಿಳಿಸಿದರು.
ಮಠಾಧೀಶರ ದಿವ್ಯ ಸಾನ್ನಿಧ್ಯ
ಕಾರ್ಯಕ್ರಮವು ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದೆ. ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ, ಹಾಸನ ಆದಿಚುಂಚನಗಿರಿ ಶಾಖಾಮಠದ ಶ್ರೀ ಶಂಭುನಾಥ ಮಹಾಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಶ್ರೀ ಡಾ. ನಿಶ್ಚಲಾನಂದನಾಥ ಮಹಾಸ್ವಾಮೀಜಿ ಹಾಗೂ ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಸಂಸದರಿಂದ ಉದ್ಘಾಟನೆ, ಶಾಸಕರ ಅಧ್ಯಕ್ಷತೆ
ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಾಸನ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಅಭಿನಂದನಾ ಭಾಷಣ ಮಾಡಲಿದ್ದಾರೆ.
ಮಾಜಿ ಸಚಿವರಾದ ಎಚ್.ಡಿ. ರೇವಣ್ಣ, ಜೆ.ಸಿ. ಮಾಧುಸ್ವಾಮಿ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ, ಮಾಜಿ ಸಚಿವ ಎ. ಮಂಜು, ಶಾಸಕರಾದ ಸಿ.ಎನ್. ಬಾಲಕೃಷ್ಣ, ಹೆಚ್.ಕೆ. ಸುರೇಶ್, ಸಿಮೆಂಟ್ ಮಂಜು, ಮಾಜಿ ಸಚಿವ ಹೆಚ್.ಕೆ. ಕುಮಾರಸ್ವಾಮಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಇದೇ ವೇಳೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿ ಅಧ್ಯಕ್ಷ ಬಿ.ಆರ್. ಗುರುದೇವ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಟೇಲ್ ಶಿವಪ್ಪ, ವಿವಿಧ ಸಂಘಟನೆಗಳ ಅಧ್ಯಕ್ಷರು, ಹಿರಿಯ ಪತ್ರಕರ್ತರು, ಸಾಹಿತಿಗಳು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರುವರು.
ಮಾಧ್ಯಮಗಳ ಸಹಕಾರಕ್ಕೆ ಮನವಿ
ಡಾ. ವೈ.ಎಸ್. ವೀರಭದ್ರಪ್ಪ ಅವರ ಪುತ್ರಿ ವೈ.ವಿ. ಗಂಧನ ತೇಜಸ್ ಮಾತನಾಡಿ, ತಮ್ಮ ತಂದೆ ನಿಸ್ವಾರ್ಥ ಸಮಾಜಸೇವೆಯನ್ನು ಜೀವನದ ಧ್ಯೇಯವಾಗಿಸಿಕೊಂಡಿದ್ದು, ಸಾಮೂಹಿಕ ವಿವಾಹ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಇಂತಹ ವ್ಯಕ್ತಿಗೆ ಸಾರ್ವಜನಿಕ ಅಭಿನಂದನೆ ಸಲ್ಲಿಸುತ್ತಿರುವುದು ಕುಟುಂಬಕ್ಕೆ ಹೆಮ್ಮೆಯ ಸಂಗತಿ ಎಂದು ಹೇಳಿದರು.
‘ಸೇವಾರತ್ನ’ ಕೃತಿಯ ಸಂಪಾದಕಿ ಬಿ.ಎಸ್. ವನಜಾಕ್ಷಿ ಬೆಟ್ಟದಾಲೂರು ಮಾತನಾಡಿ, ಡಾ. ವೈ.ಎಸ್. ವೀರಭದ್ರಪ್ಪ ಅವರ ಜೀವನ ಯುವಜನತೆಗೆ ಸ್ಫೂರ್ತಿದಾಯಕವಾಗಿದೆ. ಅವರ ಜೀವನಚರಿತ್ರೆಯನ್ನು ದಾಖಲಿಸಲು ಸುಮಾರು ಮೂರು ವರ್ಷಗಳ ಕಾಲ ಶ್ರಮವಹಿಸಿದ್ದು, ಈ ಕೃತಿ ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಲಿದೆ ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, ಸಮಾಜಸೇವೆ, ಸಾಹಿತ್ಯ, ಶಿಕ್ಷಣ, ಆರೋಗ್ಯ, ಪತ್ರಿಕೋದ್ಯಮ, ಮಹಿಳಾ ಸಬಲೀಕರಣ, ಕನ್ನಡಪರ ಹಾಗೂ ದಲಿತ ಚಳವಳಿಗಳ ವಿವಿಧ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಸೇರಲಿರುವುದು ಈ ಕಾರ್ಯಕ್ರಮದ ವಿಶೇಷವಾಗಿದೆ ಎಂದು ಆಯೋಜಕರು ತಿಳಿಸಿದರು.
