ಹಾಸನ, ಜುಲೈ 9: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ಹಾಸನ ಜಿಲ್ಲಾ ಜಾಗೃತ ಸಮಿತಿ ಸಂಯುಕ್ತ ಆಶ್ರಯದಲ್ಲಿ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭವನ್ನು ಜುಲೈ 10ರಂದು (ಶುಕ್ರವಾರ) ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಮೊದಲ ಹಂತವು ಬೆಳಿಗ್ಗೆ 10 ಗಂಟೆಗೆ ಅರಸೀಕೆರೆ ತಾಲ್ಲೂಕಿನ ಬಾಗೇಶಪುರ ಸಮೀಪದ ಗುಡ್ಡೇನಹಳ್ಳಿಯಲ್ಲಿರುವ ಡಾ. ಬಿ.ಡಿ. ಕುಮಾರ್ ಅವರ ನಿವಾಸದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ‘ಡಾ. ಬಿ.ಡಿ. ಕುಮಾರ್ ಅವರ ಸಾಹಿತ್ಯ ಸಂಶೋಧನೆ’ ಕುರಿತು ಅರಸೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಹರೀಶ್ ಕುಮಾರ್ ಉಪನ್ಯಾಸ ನೀಡಲಿದ್ದಾರೆ.
ಎರಡನೇ ಹಂತದ ಕಾರ್ಯಕ್ರಮವು ಬೆಳಿಗ್ಗೆ 11.30 ಗಂಟೆಗೆ ಹಾಸನದ ಗೊರೂರು ರಸ್ತೆಯ ಬಿಟ್ಟಗೋಡನಹಳ್ಳಿಯ ಅಕ್ಷರ ಗಂಗಾ ನಿಲಯದಲ್ಲಿ, ವಿಶ್ರಾಂತ ಪ್ರಾಂಶುಪಾಲರಾದ ಡಾ. ಓಬಳೇಶ್ ಘಟ್ಟಿ ಅವರ ನಿವಾಸದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ‘ಡಾ. ಓಬಳೇಶ್ ಘಟ್ಟಿ ಅವರ ಸಾಹಿತ್ಯ ಹಾಗೂ ಶೈಕ್ಷಣಿಕ ಕೃತಿ ಸಾಧನೆ’ ಕುರಿತು ಎಸ್.ಡಿ.ಆರ್.ಕೆ. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮೋಹನ್ ಕುಮಾರ್ ಮಾತನಾಡಲಿದ್ದಾರೆ.
ಕಾರ್ಯಕ್ರಮವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ ಉದ್ಘಾಟಿಸಲಿದ್ದು, ಹಾಸನ ಜಿಲ್ಲಾ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಿತಿಯ ಸಂಚಾಲಕರಾದ ಗೊರೂರು ಅನಂತರಾಜು ಅಧ್ಯಕ್ಷತೆ ವಹಿಸಲಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರು ಹಾಗೂ ಪ್ರಾಧ್ಯಾಪಕರಾದ ಡಾ. ಕುಶಾಲ್ ಬರಗೂರು ಆಶಯ ನುಡಿಗಳನ್ನಾಡಲಿದ್ದಾರೆ.
ಮನೆಮನೆಗಳಲ್ಲಿ ಓದುವ ಸಂಸ್ಕೃತಿ ಬೆಳೆಸುವುದು, ಪುಸ್ತಕಗಳ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವುದು ಹಾಗೂ ಸಾಹಿತ್ಯಾಸಕ್ತರನ್ನು ಗೌರವಿಸುವ ಉದ್ದೇಶದಿಂದ ಈ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
