ಅರಕಲಗೂಡು, ಜು. 9: 2026-27ನೇ ಸಾಲಿನ ಪ್ರತಿಷ್ಠಿತ ಅನಕೃ ಪ್ರಶಸ್ತಿಗೆ ಹಿರಿಯ ಸಾಹಿತಿ, ವಿಮರ್ಶಕ, ಸಂಶೋಧಕ ಹಾಗೂ ಕನ್ನಡ ಚಿಂತಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಆಯ್ಕೆಯಾಗಿದ್ದು, ಅವರಿಗೆ ಜುಲೈ 26ರಂದು ಅರಕಲಗೂಡು ಪಟ್ಟಣದ ಶಿಕ್ಷಕರ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗಾನಕಲಾಭೂಷಣ ವಿದ್ವಾನ್ ಡಾ. ಆರ್.ಕೆ. ಪದ್ಮನಾಭ ಅಭಿಮಾನಿಗಳ ಬಳಗದ ಅಧ್ಯಕ್ಷ ರಮೇಶ್ ವಾಟಳ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾನಕಲಾಭೂಷಣ ವಿದ್ವಾನ್ ಡಾ. ಆರ್.ಕೆ. ಪದ್ಮನಾಭ ಅವರ ನೇತೃತ್ವದಲ್ಲಿ 2014-15ರಿಂದ ಅನಕೃ ಅವರ ಜನ್ಮಸ್ಥಳದಲ್ಲಿ ಪ್ರತಿವರ್ಷ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಹಿರಿಯ ಸಾಹಿತಿಗಳಿಗೆ ಅನಕೃ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ಹಿಂದೆ ಪ್ರೊ. ಜಿ.ಎಸ್. ಸಿದ್ದಲಿಂಗಯ್ಯ, ಡಾ. ಹೆಚ್.ಎಸ್. ವೆಂಕಟೇಶಮೂರ್ತಿ, ಪ್ರೊ. ದೊಡ್ಡರಂಗೇಗೌಡ, ಮಾಸ್ಟರ್ ಹಿರಣ್ಣಯ್ಯ, ಪ್ರೊ. ಜಿ. ಅಶ್ವತ್ಥನಾರಾಯಣ, ಪ್ರೊ. ಬಿ.ಎಸ್. ಕೇಶವರಾವ್, ಬಿ.ಯು. ಗೀತಾ, ಡಾ. ಎಸ್.ಎಸ್. ಮಧುಕೇಶ್ವರ್, ಪ್ರೊ. ಎಂ. ಕೃಷ್ಣೇಗೌಡ, ಶಾ.ಮಂ. ಕೃಷ್ಣರಾಯ ಹಾಗೂ ಡಾ. ಹಂಪ ನಾಗರಾಜಯ್ಯ ಸೇರಿದಂತೆ ಹಲವು ಗಣ್ಯರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ತಿಳಿಸಿದರು.

ಸಾಹಿತ್ಯ ಕ್ಷೇತ್ರದ ಬಹುಮುಖ ಸಾಧಕ
1953ರ ಸೆಪ್ಟೆಂಬರ್ 5ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ನರಹಳ್ಳಿಯಲ್ಲಿ ಜನಿಸಿದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ವಿದ್ಯಾರ್ಥಿ ಜೀವನದಲ್ಲಿಯೇ ಚಿನ್ನದ ಪದಕ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರತಿಭಾ ವಿದ್ಯಾರ್ಥಿವೇತನ ಪಡೆದಿದ್ದರು. ಬಳಿಕ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದ ಅವರು ಅಧ್ಯಾಪಕ, ಪ್ರಾಧ್ಯಾಪಕ, ಪ್ರಾಂಶುಪಾಲ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಅವರು ‘ಅನುಸಂಧಾನ’, ‘ಸಾಹಿತ್ಯ ಸಂಸ್ಕೃತಿ’, ‘ಅನಕೃ ಮತ್ತು ಕನ್ನಡ ಸಂಸ್ಕೃತಿ’, ‘ನೆಲ ಸಂಸ್ಕೃತಿ’, ‘ಕುವೆಂಪು ಕಾವ್ಯ’, ‘ಕನ್ನಡ ಸಾಹಿತ್ಯ ಪರಂಪರೆ ಮತ್ತು ವರ್ತಮಾನ’, ‘ಅಂತರಂಗದ ಮೃದಂಗ’, ‘ಜೀವದಾಯಿನಿ’, ‘ನಾನು ಪಯಣಿಗ’, ‘ನಾನು ಕನಸಿಗ’ ಸೇರಿದಂತೆ ನೂರಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ.

ಹಲವು ಜವಾಬ್ದಾರಿಯುತ ಹುದ್ದೆಗಳು
ಡಾ. ಬಾಲಸುಬ್ರಹ್ಮಣ್ಯ ಅವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ, ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ, ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯ, ಕೇಂದ್ರ ಸಾಹಿತ್ಯ ಅಕಾಡೆಮಿಯ ನಿರ್ದೇಶಕ, ನವದೆಹಲಿಯ ಕನ್ನಡ ಸಾಹಿತ್ಯ ಅಕಾಡೆಮಿಯ ಸಲಹಾ ಸಮಿತಿಯ ಸಂಚಾಲಕ ಸೇರಿದಂತೆ ಹಲವು ಮಹತ್ವದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಅಲ್ಲದೆ ಅಮೆರಿಕ, ಈಜಿಪ್ಟ್, ಸಿಂಗಾಪುರ, ವಿಯೆಟ್ನಾಂ, ಕಾಂಬೋಡಿಯಾ, ಥೈಲೆಂಡ್ ಹಾಗೂ ಯೂರೋಪಿನ ಹಲವು ರಾಷ್ಟ್ರಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತು ಉಪನ್ಯಾಸ ನೀಡಿ ಕನ್ನಡದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿದ್ದಾರೆ.
ಹಲವು ಪ್ರತಿಷ್ಠಿತ ಪ್ರಶಸ್ತಿಗಳ ಪುರಸ್ಕೃತರು
ಅವರ ಸಾಹಿತ್ಯ ಸೇವೆಗೆ ವಿ.ಎಂ. ಇನಾಂದಾರ್ ಪ್ರಶಸ್ತಿ, ಜಿ.ಎಸ್.ಎಸ್. ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ, ವಿಶ್ವಮಾನವ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಕುವೆಂಪು ಸಾಹಿತ್ಯಶ್ರೀ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಹಲವು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ.
ಅರಕಲಗೂಡಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗಣ್ಯರು, ಸಾಹಿತಿಗಳು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಅನಕೃ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
