ರಾಮನಾಥಪುರ, ಜು. 9: ಹೋಬಳಿಯ ಆನಂದೂರು ಗ್ರಾಮದ ಹಿರಿಯ ರಂಗಕಲಾವಿದ ಹಾಗೂ ನಾಟಕ ನಿರ್ದೇಶಕ ಎ.ಆರ್. ಜಯಣ್ಣ ಅವರಿಗೆ ಬೆಂಗಳೂರಿನ ಕಲಾಕ್ಷೇತ್ರದ ಅಧೀನದಲ್ಲಿರುವ ಪ್ರಸಿದ್ಧ ‘ಚಿತ್ರಸಂತೆ’ ವೇದಿಕೆಯಿಂದ ‘ಕರ್ನಾಟಕ ಸಾಧಕ ಪ್ರಶಸ್ತಿ’ ಪ್ರದಾನ ಮಾಡಲಾಗಿದೆ.
ಆನಂದೂರು ಗ್ರಾಮದ ರಾಮಶೆಟ್ಟಿ ಹಾಗೂ ಮರಿಯಮ್ಮ ದಂಪತಿಯ ಪುತ್ರರಾದ ಜಯಣ್ಣ ಅವರು ಗ್ರಾಮೀಣ ಪ್ರದೇಶದಲ್ಲಿ ಜನಿಸಿ ರಂಗಭೂಮಿಯನ್ನೇ ತಮ್ಮ ಬದುಕಿನ ಧ್ಯೇಯವನ್ನಾಗಿ ಮಾಡಿಕೊಂಡಿದ್ದಾರೆ. ಹಲವು ದಶಕಗಳಿಂದ ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಅವರು, ಪೌರಾಣಿಕ ನಾಟಕಗಳ ನಿರ್ದೇಶಕರಾಗಿ 60ಕ್ಕೂ ಹೆಚ್ಚು ನಾಟಕಗಳನ್ನು ಯಶಸ್ವಿಯಾಗಿ ರಂಗಮಂಚಕ್ಕೆ ತಂದಿದ್ದಾರೆ.

ರಂಗಭೂಮಿಗೆ ಸಲ್ಲಿಸಿರುವ ವಿಶಿಷ್ಟ ಸೇವೆ, ಕಲೆಯ ಮೇಲಿನ ಅಪಾರ ಅಭಿರುಚಿ ಹಾಗೂ ಸಮರ್ಪಣೆಯನ್ನು ಪರಿಗಣಿಸಿ, ಬೆಂಗಳೂರಿನ ಚಿತ್ರಸಂತೆ ವೇದಿಕೆ ಅವರಿಗೆ ‘ಕರ್ನಾಟಕ ಸಾಧಕ ಪ್ರಶಸ್ತಿ’ ಹಾಗೂ ‘ಹೆಮ್ಮೆಯ ಕನ್ನಡಿಗ’ ಗೌರವವನ್ನು ನೀಡಿ ಸನ್ಮಾನಿಸಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಜಯಣ್ಣ, “ಕಲೆ ಎಂಬುದು ಕೇವಲ ಮನರಂಜನೆಯ ಸಾಧನವಲ್ಲ; ಅದು ಸಮಾಜಕ್ಕೆ ದಾರಿದೀಪವಾಗಬೇಕು. ಕಲೆ ಸಮಾಜದ ಜೀವಂತಿಕೆ ಮತ್ತು ಚೇತನವನ್ನು ಹೆಚ್ಚಿಸಬೇಕೇ ಹೊರತು ಕ್ರೌರ್ಯ ಅಥವಾ ವಿನಾಶಕ್ಕೆ ಕಾರಣವಾಗಬಾರದು” ಎಂದು ಅಭಿಪ್ರಾಯಪಟ್ಟರು.
ಜಯಣ್ಣ ಅವರಿಗೆ ದೊರೆತಿರುವ ಈ ರಾಜ್ಯಮಟ್ಟದ ಗೌರವಕ್ಕೆ ಆನಂದೂರು ಗ್ರಾಮಸ್ಥರು, ಕಲಾಭಿಮಾನಿಗಳು ಹಾಗೂ ರಂಗಭೂಮಿ ಕ್ಷೇತ್ರದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
