ಹಾಸನ, ಜು.10: ಹಾಸನ ಜಿಲ್ಲಾ ಲಾರಿ ಮಾಲೀಕರ ಸಂಘ(ರಿ) ವತಿಯಿಂದ ಜಿಲ್ಲೆಯ ಎಲ್ಲಾ ಲಾರಿ ಮಾಲೀಕರಿಗೆ ಸಂಘದ ಸದಸ್ಯತ್ವ ನೋಂದಣಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನಂದಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2005-06ರಿಂದ ಹಾಸನ ಜಿಲ್ಲಾ ಲಾರಿ ಮಾಲೀಕರ ಸಂಘವು ಜಿಲ್ಲೆಯ ಲಾರಿ ಮಾಲೀಕರ ಹಿತಾಸಕ್ತಿ ಹಾಗೂ ಕ್ಷೇಮಾಭಿವೃದ್ಧಿಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ ಎಲ್ಲ ಲಾರಿ ಮಾಲೀಕರು ಸಂಘದ ಸದಸ್ಯತ್ವ ಪಡೆದು ಸಂಘವನ್ನು ಮತ್ತಷ್ಟು ಬಲಪಡಿಸಬೇಕೆಂದು ಮನವಿ ಮಾಡಿದರು.
ಹಾಸನ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಲಾರಿ ಮಾಲೀಕರು ಅಗತ್ಯ ದಾಖಲೆಗಳೊಂದಿಗೆ ಜುಲೈ 14, 2026ರೊಳಗೆ ಸಂಘದ ಕಚೇರಿಯಲ್ಲಿ ಸದಸ್ಯತ್ವಕ್ಕಾಗಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಸದಸ್ಯತ್ವ ನೋಂದಾಯಿಸಿದವರಿಗೆ ಜುಲೈ 16ರಂದು ಬೆಳಿಗ್ಗೆ 10 ಗಂಟೆಗೆ ಹಾಸನ ನಗರದ ಕನ್ನಡ ಸಾಹಿತ್ಯ ಪರಿಷತ್ ಕಲಾಭವನದ ಪಕ್ಕದ ಸಾಲಗಾಮ ರಸ್ತೆಯಲ್ಲಿ ನಡೆಯುವ ಸಭೆಯಲ್ಲಿ ಗುರುತಿನ ಚೀಟಿಗಳನ್ನು ವಿತರಿಸಲಾಗುವುದು ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಹಾಸನ ಜಿಲ್ಲಾ ಲಾರಿ ಮಾಲೀಕರ ಸಂಘದ ಕಚೇರಿ ದೂರವಾಣಿ 08172-233585 ಅಥವಾ ಸಂಘದ ಕಾರ್ಯದರ್ಶಿಯವರ ಮೊಬೈಲ್ ಸಂಖ್ಯೆ 9686871533 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಚಂದ್ರು, ಗಣೇಶ್, ಸ್ವಾಮಿ, ಸುಂದ್ರಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
