ಹಾಸನ, ಜು.11: ಭೋವಿ ಸಮಾಜದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಐಕ್ಯತೆಯನ್ನು ಬಲಪಡಿಸುವ ಉದ್ದೇಶದಿಂದ ಜುಲೈ 19ರಂದು ಭಾನುವಾರ ಚಿತ್ರದುರ್ಗದ ಶ್ರೀ ಶಿವಯೋಗಿ ಸಿದ್ಧರಮೇಶ್ವರ ಮಹಾಸಂಸ್ಥಾನದ ಭೋವಿ ಗುರುಪೀಠದಲ್ಲಿ ರಾಷ್ಟ್ರೀಯ ಭೋವಿ ಜನೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಭೋವಿ ಮಹಾಸಭೆಯ ರಾಜ್ಯಾಧ್ಯಕ್ಷ ಹೆಚ್. ಮಂಜಪ್ಪ ಹಾಗೂ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಂ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೋವಿ ಗುರುಪೀಠದ ಇಮ್ಮಂಡಿ ಸಿದ್ಧರಮೇಶ್ವರ ಮಹಾಸ್ವಾಮಿಗಳ 40ನೇ ಜನ್ಮದಿನದ ಅಂಗವಾಗಿ ಈ ಬೃಹತ್ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭೋವಿ ಸಮಾಜದ ಬಂಧುಗಳು, ಮಠಾಧೀಶರು, ಜನಪ್ರತಿನಿಧಿಗಳು, ಯುವಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸುವ ನಿರೀಕ್ಷೆಯಿದ್ದು, ಉಪಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದರು.
ಪ್ರತಿಭಾವಂತರಿಗೆ ಸನ್ಮಾನ
ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಭೋವಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಜೊತೆಗೆ ವಧು-ವರರ ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಚಿತ್ರಕಲಾ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸರ್ಕಾರದ ಮುಂದೆ ಪ್ರಮುಖ ಬೇಡಿಕೆಗಳು
ಸಮಾವೇಶದಲ್ಲಿ ಭೋವಿ ಸಮಾಜದ ಹಲವು ವರ್ಷಗಳ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು. ಸಮಾಜಕ್ಕೆ ಒಳಮೀಸಲಾತಿಯನ್ನು ಮರುಪರಿಶೀಲಿಸುವುದು, ಸಚಿವ ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ, ವಿಧಾನ ಪರಿಷತ್ ಹಾಗೂ ವಿವಿಧ ನಿಗಮ-ಮಂಡಳಿಗಳಲ್ಲಿ ಹೆಚ್ಚಿನ ಅವಕಾಶ, ಕಲ್ಲು ಕಸುಬು ಮತ್ತು ಕ್ವಾರಿ ಉದ್ಯಮದ ಸಮಸ್ಯೆಗಳ ಪರಿಹಾರ, 3ಎಫ್ ಅಡಿಯಲ್ಲಿನ ಗಣಿಗಾರಿಕೆ ಅರ್ಜಿಗಳ ತ್ವರಿತ ವಿಲೇವಾರಿ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.
ಅಲ್ಲದೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಸೌಲಭ್ಯ, ವಿದ್ಯಾರ್ಥಿವೇತನ, ವಸತಿ ನಿಲಯಗಳು, ಯುವಕರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಯೋಜನೆಗಳು ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ತಿಳಿಸಿದರು.
ಹಾಸನ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಷ್ಟ್ರೀಯ ಭೋವಿ ಜನೋತ್ಸವವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಭೋವಿ ಮಹಾಸಭೆಯ ಜಿಲ್ಲಾಧ್ಯಕ್ಷ ಸಂದೀಪ್, ಮೈಸೂರು ವಿಭಾಗದ ಅಧ್ಯಕ್ಷ ವಿಜಯಕುಮಾರ್, ನಿವೃತ್ತ ಶಿಕ್ಷಕ ಲಕ್ಷ್ಮಪ್ಪ, ದಿಲೀಪ್, ರಾಮಸ್ವಾಮಿ, ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
