ತುಮಕೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಜಾತಿ ಸ್ವೀಕರಿಸಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಅಧಿವೇಶನದಲ್ಲಿ ಮಂಡಿಸಬೇಕು. ವರದಿಯ ಅಂಶಗಳನ್ನು ರಾಜ್ಯದ ಜನರಿಗೆ ತಿಳಿಸಬೇಕು. ಜಾತಿ ಜನಗಣತಿ ಬಗ್ಗೆ ಬದ್ಧತೆಯ ರಾಜಕಾರಣ ಕೊರತೆಯಿಂದ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂದು ದೊಡ್ಡಬಳ್ಳಾಪುರ ಶಾಸಕ, ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಧೀರಜ್ ಮುನಿರಾಜು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
2013ರಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ಮೂಲೆಗೆ ಹಾಕಿ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ಧರಾಮಯ್ಯನವರು ಜಾತಿ ಜನಗಣತಿಯ ವಿಷಯದಲ್ಲಿ ಬರೀ ಮಾತಿನ ಶೂರರಾದರು, ಒಬಿಸಿ ಸಮುದಾಯಗಳ ಅಶೋತ್ತರಗಳಿಗೆ ಕವಡೆ ಕಾಸಿನ ಕಿಮ್ಮತ್ತು ಸಿಗದಂತೆ ಮಾಡಿದರು.
600ಕೋಟಿ ರೂ ತೆರಿಗೆ ಹಣ ಮುಳುಗಿಸಿ ಕೈತೊಳೆದುಕೊಂಡಿದ್ದಾರೆ. ಕಾಂಗ್ರೆಸ್ಸಿನಲ್ಲಿರುವ ಹಿಂದುಳಿದ ವರ್ಗಗಳ ನಾಯಕರಿಗೆ ಮಂತ್ರಿ ಸ್ಥಾನ, ಖಾತೆಗಳದ್ದೆ ಚಿಂತೆಯಾಗಿದೆ. ಸರ್ಕಾರ ಜಾತಿ ಜನಗಣತಿಯ ಹೆಸರಿನಲ್ಲಿ ವೋಟಿನ ರಾಜಕೀಯ ಬಿಟ್ಟರೆ ಮತ್ತೇನು ಮಾಡಿಲ್ಲ. ಕೇಂದ್ರ ಸರ್ಕಾರವೇ ಅಧಿಕೃತವಾಗಿ ಜಾತಿ ಜನಗಣತಿಯ ಸಿದ್ಧತೆ, ಪ್ರಕ್ರಿಯೆ ಆರಂಭಿಸಿದ್ದು, ಆಮೂಲಕವೇ ಕರ್ನಾಟಕದ ಜನತೆ ಸಾಮಾಜಿಕ ನ್ಯಾಯ ಪಡೆದುಕೊಳ್ಳಬೇಕಾಗಿದೆ. ರಾಜ್ಯದ ಜನ ಅದರಲ್ಲೂ ವಿಶೇಷವಾಗಿ ಹಿಂದುಳಿದ ವರ್ಗಗಳು ರೋಸಿ ಹೋಗಿ, ರೊಚ್ಚಿಗೆದ್ದು ಬೀದಿಗಿಳಿಯುವ ದಿನ ದೂರವಿಲ್ಲ. ಸರ್ಕಾರ ಸಮೀಕ್ಷಾ ವರದಿ ಮಂಡನೆ ಮಾಡದಿದ್ದರೆ ಬಿಜೆಪಿ ಉಗ್ರವಾದ ಹೋರಾಟ ಮಾಡುವುದು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಹೆಬ್ಬಾಕ, ಅಂಬಿಕಾ ಹುಲಿನಾಯ್ಕರ್, ಎಸ್.ಪಿ. ಚಿದಾನಂದ್, ಶಿವಕುಮಾರ್, ಗಂಗಣ್ಣ, ಶಶಿಕಿರಣ್, ನಂಜೇಗೌಡ, ವಕ್ತಾರ ಜೆ.ಜಗದೀಶ್ ಮೊದಲಾದವರು ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
