ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಪನಹಳ್ಳಿ ಗವಿಮಠದ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ಹಾಗೂ ಕಲ್ಲಹಳ್ಳಿಯ ಪ್ರಸಿದ್ಧ ಭೂ ವರಾಹನಾಥಸ್ವಾಮಿ ದೇವಾಲಯಗಳಲ್ಲಿ ಪ್ರಧಾನ ಸಂಪಾದಕ ವಿ.ಲೋಕೇಶ್ ಹಾಗೂ ಉಪ ಸಂಪಾದಕ ಜಿ.ಪಿ.ರಾಜು ಅವರ ನೇತೃತ್ವದಲ್ಲಿ ಕನ್ನಡ ಹುಲಿ ವಾರಪತ್ರಿಕೆಯನ್ನು ಕಾಪನಹಳ್ಳಿ ಗವಿಮಠದ ಪೀಠಧ್ಯಕ್ಷರಾದ ಶ್ರೀ ಚನ್ನವಿರಯ್ಯ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹೇಮಗಿರಿ ಬಿಜಿಎಸ್ ಶಾಖಾ ಮಠದ ಪ್ರಧಾನ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೆಗೌಡ ಮಾತನಾಡಿ ತಾಲ್ಲೂಕು ಮಟ್ಟದಲ್ಲಿ ಸ್ಥಳೀಯ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಪತ್ರಿಕೆಯ ಅವಶ್ಯಕತೆ ಇತ್ತು.ಕಬ್ಬಿಣದ ಕಡಲೆಯಾದರೂ ಅದನ್ನು ನಿರ್ವಹಿಸುತ್ತೇನೆ ಎನ್ನುವ ಧೈರ್ಯಕ್ಕೆ ನಿಜಕ್ಕೂ ಮೆಚ್ಚುಗೆ ತಾಲ್ಲೂಕಿನ ಜನರು ಅನ್ಯಾಯದ ವಿರುದ್ಧ ನಿಲ್ಲುವ ಪತ್ರಿಕೆಯಾಗಲಿ ಎಂದು ಶುಭ ಹಾರೈಸಿದರು.

ನೂತನ ಪತ್ರಿಕೆಗೆ ಚಾಲನೆ ನೀಡಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಹುಲಿ ಅಮರನಾಥ್ ಅವರು ಪತ್ರಿಕೋದ್ಯಮ ಎಂದರೆ ಕೇವಲ ಸುದ್ದಿ ಬರೆಯುವುದಲ್ಲ.ಅದು ಸಮಾಜದ ಕನ್ನಡಿಯಾಗಿರಬೇಕು.ಕನ್ನಡ ಹುಲಿ ಪತ್ರಿಕೆ ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ಸಾಮಾನ್ಯ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಬೇಕು. ಈ ಪುಣ್ಯ ಕ್ಷೇತ್ರದಲ್ಲಿ ನಮ್ಮ ಯುವ ಪತ್ರಕರ್ತರಾದ ವಿ.ಲೋಕೇಶ್ ಹಾಗೂ ಜಿ.ಪಿ.ರಾಜು ಅವರು ನೂತನ ಪತ್ರಿಕೆಗೆ ಚಾಲನೆ ನೀಡುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಬಿ.ಸಿ. ಮಂಜುನಾಥ್ ಅವರು,ಒಂದು ಪತ್ರಿಕೆಯನ್ನು ಹುಟ್ಟುಹಾಕಿ ಅದನ್ನು ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಇದು ದೊಡ್ಡ ತಪಸ್ಸು ಮತ್ತು ಸಾಧನೆ.ಪತ್ರಕರ್ತರಾದ ವಿ.ಲೋಕೇಶ್ ಮತ್ತು ರಾಜು ಅವರು ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ವಿಶ್ವಾಸವಿದೆ. ವಸ್ತುನಿಷ್ಠ ವರದಿಯ ಮೂಲಕ ಓದುಗರ ವಿಶ್ವಾಸ ಗಳಿಸಲಿ ಎಂದು ಶುಭ ಹಾರೈಸಿದರು.
ಶ್ರೀ ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟಿ ಗಂಜಿಗೆರೆ ಮಹೇಶ್ ಮಾತನಾಡಿ ನಮ್ಮ ತಾಲ್ಲೂಕಿನ ಪತ್ರಕರ್ತರಾದ ವಿ.ಲೋಕೇಶ್ ಹಾಗೂ ಜಿ.ಪಿ.ರಾಜು ಅವರ ನೇತೃತ್ವದಲ್ಲಿ ವಾರಪತ್ರಿಕೆ ಲೋಕಾರ್ಪಣೆಗೊಳ್ಳುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಈ ಪತ್ರಿಕೆ ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ, ಬೇಜವಾಬ್ದಾರಿ ಅಧಿಕಾರಿಗಳ ಕಣ್ಣು ತೆರೆಯುವ ಕೆಲಸ ಮಾಡಬೇಕು. ನೊಂದವರ ಧ್ವನಿಯಾಗಿ ನೂರಾರು ವರ್ಷಗಳ ಕಾಲ ಈ ಪತ್ರಿಕೆ ನಡೆಯಲಿ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಕಾಪನಹಳ್ಳಿ ಗವಿಮಠದ ಪೀಠಧ್ಯಕ್ಷರಾದ ಶ್ರೀ ಚನ್ನವಿರಯ್ಯ ಸ್ವಾಮೀಜಿ, ಭೂವರಾಹನಾಥ ದೇವಾಲಯದ ವ್ಯವಸ್ಥಾಪಕ ಶ್ರೀನಿವಾಸ್ ರಾಘವನ್, ಹಿರಿಯ ಪತ್ರಕರ್ತ ಕೆ.ಆರ್. ನೀಲಕಂಠ, ಬೂಸಾ ಸತೀಶ್, ಕನ್ನಡ ಹುಲಿ ಪತ್ರಿಕೆಯ ಪ್ರಧಾನ ಸಂಪಾದಕ ವಿ.ಲೋಕೇಶ್,ಉಪ ಸಂಪಾದಕ ಜಿ.ಪಿ.ರಾಜು, ಪತ್ರಕರ್ತರಾದ ಕಾಮನಹಳ್ಳಿ ಮಂಜುನಾಥ್, ಹೊಸಹೊಳಲು ರಘು, ಶ್ಯಾರಹಳ್ಳಿ ಗೋವಿಂದರಾಜು, ಜಗದೀಶ್, ಖಲೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ.ಆರ್.ಪೇಟೆ*
