ಚನ್ನರಾಯಪಟ್ಟಣ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಕರ್ನಾಟಕ ಪುಸ್ತಕ ಪ್ರಾಧಿಕಾರ, ಬೆಂಗಳೂರು ಇವರ ಸಹಯೋಗದಲ್ಲಿ ಚನ್ನರಾಯಪಟ್ಟಣದ ನಮ್ಮ ರಂಗ ಲೋಕದಲ್ಲಿ ‘ಮನೆಗೊಂದು ಗ್ರಂಥಾಲಯ’ ಹಾಗೂ ‘ಕೃತಿಕಾರರ ಪರಿಚಯ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ ಅವರು, ‘ಮನೆಗೊಂದು ಗ್ರಂಥಾಲಯ’ ಯೋಜನೆಯ ಉದ್ದೇಶ, ಮಹತ್ವ ಹಾಗೂ ಓದುವ ಸಂಸ್ಕೃತಿಯನ್ನು ಮನೆಮನೆಗೂ ತಲುಪಿಸುವ ಅಗತ್ಯವನ್ನು ವಿವರಿಸಿದರು.

ಲೇಖಕಿ ಶ್ರೀಮತಿ ನೇತ್ರಾವತಿ ಅವರು ತಮ್ಮ ‘ಕಪ್ಪು ಹಲ್ಲಿನ’ ಕಾದಂಬರಿಯ ಕುರಿತು ಮಾತನಾಡಿ, ಕೃತಿಯ ರಚನೆಗೆ ಕಾರಣವಾದ ಸನ್ನಿವೇಶಗಳು, ಕಥಾವಸ್ತು ಹಾಗೂ ಅದರ ಸಾಹಿತ್ಯಿಕ ಮಹತ್ವವನ್ನು ಪರಿಚಯಿಸಿದರು.
ಪ್ರತಿಮಾ ಟ್ರಸ್ಟ್ ಸರ್ಕಾರಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಈ ವರ್ಷದ ವಾರ್ಷಿಕ ಶಿಬಿರಕ್ಕೆ ನಮ್ಮ ಶಾಲೆಯನ್ನು ಆಯ್ಕೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಲಾಯಿತು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಚ್.ಎನ್. ಲೋಕೇಶ್ ಮಾತನಾಡಿ, ಕರ್ನಾಟಕ ಪುಸ್ತಕ ಪ್ರಾಧಿಕಾರವು ಹಾಸನ ಜಿಲ್ಲೆಯಲ್ಲಿ ಸಾಹಿತ್ಯ ಸಂಬಂಧಿತ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಜೊತೆಗೆ ಪ್ರತಿಮಾ ಟ್ರಸ್ಟ್ ಹಮ್ಮಿಕೊಳ್ಳುವ ಎಲ್ಲ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೂ ತಮ್ಮ ಬೆಂಬಲ ಮುಂದುವರಿಯಲಿದೆ ಎಂದು ತಿಳಿಸಿದರು.

ಹಾಸನದ ಹಿರಿಯ ಪತ್ರಕರ್ತ ಗೊರೂರು ಅನಂತರಾಜ್ ಅವರು ಪ್ರತಿಮಾ ಟ್ರಸ್ಟ್ನ ಸಾಮಾಜಿಕ ಹಾಗೂ ಸಾಹಿತ್ಯ ಚಟುವಟಿಕೆಗಳನ್ನು ಪ್ರಶಂಸಿಸಿ, ಮುಂದಿನ ದಿನಗಳಲ್ಲಿ ಟ್ರಸ್ಟ್ನೊಂದಿಗೆ ಇನ್ನಷ್ಟು ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸುವ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಡಾ. ಬರಾಳ್ ಶಿವರಾಮ್, ಡಾ. ಕುಶಾಲ್, ಕೆ.ಎಂ. ನಾಗರಾಜು, ಎ.ಎಲ್. ನಾಗೇಶ್ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.
