ರಾಮನಾಥಪುರ, ಜು.11: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ “ಮಕ್ಕಳ ಮನೆ” ಯೋಜನೆ ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸ್ಪಂದನೆ ಪಡೆಯುತ್ತಿದ್ದು, ಸರ್ಕಾರಿ ಶಾಲೆಗಳ ಮೇಲಿನ ಪೋಷಕರ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಶಾಸಕ ಎ. ಮಂಜು ಅವರ ಧರ್ಮಪತ್ನಿ ತಾರಾ ಮಂಜು ಹೇಳಿದರು.
ರಾಮನಾಥಪುರ ಹೋಬಳಿಯ ಕೇರಳಾಪುರ ಗ್ರಾಮದಲ್ಲಿ ನಡೆದ 20ನೇ ಮಕ್ಕಳ ಮನೆ ಕೇಂದ್ರದ ಉದ್ಘಾಟನೆ ಹಾಗೂ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ತಾಲೂಕಿನಲ್ಲಿ 20 ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಮನೆ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಕೇಂದ್ರಗಳಿಗೆ ಗ್ರಾಮೀಣ ಭಾಗದ ಪೋಷಕರಿಂದ ಅತ್ಯುತ್ತಮ ಪ್ರೋತ್ಸಾಹ ದೊರೆಯುತ್ತಿದ್ದು, ದಾಖಲಾತಿಗಾಗಿ ಈಗಾಗಲೇ ಅನೇಕ ಪೋಷಕರು ಕರೆ ಮಾಡಿ ಮಕ್ಕಳನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಗ್ರಾಮೀಣ ಮಕ್ಕಳಿಗೆ ಖಾಸಗಿ ಶಾಲೆಗಳ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ವ್ಯವಸ್ಥೆಯಲ್ಲೇ ಒದಗಿಸುವ ಉದ್ದೇಶದಿಂದ ಮಕ್ಕಳ ಮನೆ ಯೋಜನೆಯನ್ನು ರೂಪಿಸಲಾಗಿದೆ. ಎಲ್ಕೆಜಿ ಹಾಗೂ ಯುಕೆಜಿ ಮಕ್ಕಳಿಗೆ ಆಟದ ಮೂಲಕ ಕಲಿಕೆ, ಸೃಜನಾತ್ಮಕ ಚಟುವಟಿಕೆಗಳು ಮತ್ತು ಗುಣಮಟ್ಟದ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲಾಗುತ್ತಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಇದು ಸಹಕಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಮನೆ ಕೇಂದ್ರವನ್ನು ಉದ್ಘಾಟಿಸಿದ ತಾರಾ ಮಂಜು, ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ, ಶಾಲಾ ಬ್ಯಾಗ್ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಿದರು. ಈ ಯೋಜನೆಯ ಮೂಲಕ ಗ್ರಾಮೀಣ ಭಾಗದ ಪೋಷಕರಿಗೆ ಆರ್ಥಿಕ ನೆರವು ದೊರೆಯುವುದರ ಜೊತೆಗೆ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಭಾಗವಹಿಸಿ, ಮಕ್ಕಳ ಮನೆ ಯೋಜನೆಯ ಯಶಸ್ಸಿಗೆ ಶುಭ ಹಾರೈಸಿದರು.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ.
