ತುಮಕೂರು: ವಿದ್ಯುತ್ ಶಾಕ್ನಿಂದ ಶಾಲೆಯಲ್ಲಿ ಮೃತಪಟ್ಟ ಕೊರಟಗೆರೆ ತಾಲ್ಲೂಕಿನ ಸಿ.ಎನ್.ದುರ್ಗ ಹೋಬಳಿಯ ಬೋರಪ್ಪನಹಳ್ಳಿಯ ವಿದ್ಯಾರ್ಥಿ ಪುನೀತ್ ಮನೆಗೆ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಂಗಳವಾರ ಭೇಟಿ ನೀಡಿ ಪೋಷಕರಿಗೆ ಸಾಂತ್ವನ, ಶ್ರೀಮಠ ನಿಮ್ಮ ಜೊತೆಗಿರುತ್ತದೆ, ನಿಮ್ಮ ಕಷ್ಟಸುಖಗಳಿಗೆ ಸ್ಪಂದಿಸುತ್ತದೆ ಎಂದು ಭರವಸೆ ನೀಡಿದರು.
ಸರ್ಕಾರಿ ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ಪ್ರಥಮ ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿ,ಉತ್ತಮ ಕ್ರೀಡಾಪಟುವಾಗಿದ್ದ ಪುನೀತ್ ವಿದ್ಯುತ್ ಶಾಕ್ಗೆ ಒಳಗಾಗಿ ದುರ್ಮರಣ ಹೊಂದಿರುವುದು ಅತ್ಯಂತ ದುಃಖಕರ, ಇಡೀ ಸಮಾಜ ತಲೆತಗ್ಗಿಸುವಂತಹ ಘಟನೆ ಎಂದು ಹೇಳಿ ಶಾಲಾ ವ್ಯವಸ್ಥೆಯ ಬೇಜವಾಬ್ದಾರಿತನ ಖಂಡನೀಯ ಎಂದು ಸ್ವಾಮೀಜಿ ಹೇಳಿದರು.
ಪಾವಗಡ ಶಾಸಕ ಹೆಚ್.ವಿ.ವೆಂಕಟೇಶ್, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ಪ ಅವರು ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.ಈ ವೇಳೆ ಮಾತನಾಡಿದ ನಿಗಮದ ಅಧ್ಯಕ್ಷ ರಾಮಪ್ಪ, ನಿಗಮದಿಂದ ಹಾಗೂ ಸಮಾಜಕಲ್ಯಾಣ ಇಲಾಖೆಯಿಂದ ಸಿಗಬಹುದಾದ ಎಲ್ಲಾ ನೆರವನ್ನು ಮೃತ ವಿದ್ಯಾರ್ಥಿಯ ಕುಟುಂಬದವರಿಗೆ ದೊರಕಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.
ಜಿಲ್ಲಾ ಭೋವಿ ಸಂಘದ ಅಧ್ಯಕ್ಷ, ರಾಜ್ಯ ಬಿಜೆಪಿ ಎಸ್.ಸಿ.ಮೋರ್ಚಾ ಕಾರ್ಯದರ್ಶಿ ಓಂಕಾರ್ ಮಾತನಾಡಿ, ದುರಂತಕ್ಕೆ ಕಾರಣರು ಎನ್ನಲಾದ ಶಾಲಾ ಶಿಕ್ಷಕಿಯನ್ನು ಅಮಾನುತು ಮಾಡಲಾಗಿದೆ ಎಂದು ಡಿಡಿಪಿಐ ಹೇಳಿದ್ದಾರೆ, ಇದು ಸ್ವಾಗತಾರ್ಹಕ್ರಮ ಶಾಲಾ ಆವರಣದಲ್ಲಿ ವಿದ್ಯುತ್ ಸಂಪರ್ಕದAತಹ ಅಪಾಯಕಾರಿ ವ್ಯವಸ್ಥೆಗಳು ವಿದ್ಯಾರ್ಥಿಗಳ ಕೈಗೆಟುಕುವಂತಿದೆ.
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಹಾಗೂ ಕೊರಟಗೆರೆ ಬಿ.ಇ.ಒ ರವರುಗಳು ಗ್ರಾಮಕ್ಕೆ ಭೇಟಿ ನೀಡಿ ಪರೀಶೀಲನೆ ನೆಡೆಸಿರುವುದು ಸ್ವಾಗತಾರ್ಹ, ಅಮಾಯಕ ವಿದ್ಯಾರ್ಥಿ ಪುನೀತ್ ತನ್ನ ತಂದೆತಾಯಿಯ ಏಕೈಕ ಮಗ.ತಂದೆ ಕಟ್ಟಡ ಕಾರ್ಮಿಕರಾಗಿ ದಿನಗೂಲಿ ಮಾಡಿ ಕುಟುಂಬವನ್ನು ಸಾಗಿಸುತ್ತಿದ್ದು, ಭವಿಷ್ಯದಲ್ಲಿ ಕುಟುಂಬಕ್ಕೆ ಆಸರೆಯಾಗಬೇಕಿದ್ದ ಪುನೀತ್, ಶಿಕ್ಷಣ ಇಲಾಖೆ ಹಾಗೂ ಬೆಸ್ಕಾಂ ಇಲಾಖೆಯ ನಿರ್ಲಕ್ಷ್ಯಕ್ಕೆ ಬಲಿಯಾಗಿರುವುದುಕುಟುಂಬದ ಪಾಲಿಗೆ ಎಂದಿಗೂ ತುಂಬಲಾಗದ ನಷ್ಟವಾಗಿದೆ. ಆದ್ದರಿಂದ ಮೃತ ವಿದ್ಯಾರ್ಥಿ ಪುನೀತ್ ಅವರ ಕುಟುಂಬಕ್ಕೆ ಸರ್ಕಾರದ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
– ಕೆ.ಬಿ.ಚಂದ್ರಚೂಡ
