ಕೆ.ಆರ್.ಪೇಟೆ, ಜು.17: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಹಾಗೂ ಮಂಡ್ಯ ಜಿಲ್ಲಾ ಜಾಗೃತ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಸಮಾರಂಭವು ಜುಲೈ 19ರಂದು (ಭಾನುವಾರ) ಕೆ.ಆರ್.ಪೇಟೆ ಪಟ್ಟಣದಲ್ಲಿ ಎರಡು ಹಂತಗಳಲ್ಲಿ ನಡೆಯಲಿದೆ.
ಮಧ್ಯಾಹ್ನ 2.15ಕ್ಕೆ ಲೇಖಕ ಸಾ.ಶಿ. ಜಯಕುಮಾರ್ ಅವರ ನಿವಾಸದಲ್ಲಿ ಮೊದಲ ಕಾರ್ಯಕ್ರಮ ಹಾಗೂ ಸಂಜೆ 3.30ಕ್ಕೆ ಕವಯತ್ರಿ ಧನಲಕ್ಷ್ಮಿ ಪ್ರಕಾಶ್ ಅವರ ನಿವಾಸದಲ್ಲಿ ಎರಡನೇ ಕಾರ್ಯಕ್ರಮ ನಡೆಯಲಿದೆ.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಅವರು ಎರಡೂ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದು, ಮಂಡ್ಯ ಜಿಲ್ಲಾ ಜಾಗೃತ ಸಮಿತಿಯ ಸಂಚಾಲಕ ಕಾರಸವಾಡಿ ಮಹಾದೇವ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಹಾಗೂ ಕನ್ನಡ ಪ್ರಾಧ್ಯಾಪಕ ಡಾ. ಕುಶಾಲ್ ಬರಗೂರು ಭಾಗವಹಿಸಲಿದ್ದಾರೆ.
ಮೊದಲ ಸಾಹಿತ್ಯ ಕಾರ್ಯಕ್ರಮದಲ್ಲಿ ಡಾ. ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೊ ಕಾದಂಬರಿಯ ಕುರಿತು ಉಮೇಶ್ ದಡಮಳ್ಳಿ ಉಪನ್ಯಾಸ ನೀಡಲಿದ್ದು, ಎರಡನೇ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಗೊರೂರು ಅನಂತರಾಜು ಅವರು ಧನಲಕ್ಷ್ಮಿ ಪ್ರಕಾಶ್ ಅವರ ಕವನ ಸಂಕಲನ ಕುರಿತು ಮಾತನಾಡಲಿದ್ದಾರೆ.
ಕಾರ್ಯಕ್ರಮಗಳಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರು, ಜಿಲ್ಲಾ ಜಾಗೃತ ಸಮಿತಿಯ ಪದಾಧಿಕಾರಿಗಳು, ಸಾಹಿತ್ಯಾಸಕ್ತರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.
‘ಮನೆಗೊಂದು ಗ್ರಂಥಾಲಯ’ ಯೋಜನೆಯಡಿ ನಡೆಯುವ ಈ ಸಾಹಿತ್ಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಳ್ಳುವಂತೆ ಕವಿ ಮೊಹಮ್ಮದ್ ಅಜರುದ್ದೀನ್ ಮನವಿ ಮಾಡಿದ್ದಾರೆ.
