ಕೊರಟಗೆರೆ : – ಒಂದು ಕಾಲದಲ್ಲಿ ಯಾವುದೇ ಮೌಲ್ಯವಿಲ್ಲದೆ ಉರುವಲಿಗೆ ಅಥವಾ ತ್ಯಾಜ್ಯವಾಗಿ ಬಳಸಲಾಗುತ್ತಿದ್ದ ಕೊಬ್ಬರಿ ಚಿಪ್ಪು (ಕರಟ) ಇದೀಗ ರೈತರಿಗೆ ಉತ್ತಮ ಆದಾಯದ ಮೂಲವಾಗಿ ಪರಿಣಮಿಸಿದೆ.
ಎಳನೀರು ಮತ್ತು ತೆಂಗಿನಕಾಯಿಯ ಬೆಲೆ ಏರಿಕೆಯ ನಡುವೆಯೇ ಕೊಬ್ಬರಿ ಚಿಪ್ಪಿನ ಬೆಲೆಯೂ ಏರಿಕೆಯಾಗಿದ್ದು, ಸಾವಿರ ಚಿಪ್ಪಿಗೆ ₹4,500 ದರ ದೊರೆಯುವ ಮೂಲಕ ರೈತರ ಮುಖದಲ್ಲಿ ಮಂದಹಾಸ ಬೀರಿದೆ.

ಕಲ್ಪತರು ನಾಡು ತುಮಕೂರು ಎಂದೇ ಪ್ರಸಿದ್ಧಿ ಹೊಂದಿರುವ ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆ ಹೋಬಳಿಯ ರೈತ ತೆಂಗಿನಕಾಯಿ ಚಿಪ್ಪಿನಿಂದ ಅಧಿಕ ಲಾಭ ಪಡೆಯುವ ಮೂಲಕ ರಾಜ್ಯದಲ್ಲಿಯೇ ಸುದ್ಧಿಯಾಗಿದ್ದು, ತೆಂಗಿನಕಾಯಿ ಚಿಪ್ಪಿಗೂ ಯೋಗ ಬಂದಂತಾಗಿ ತೆಂಗಿನಕಾಯಿಯ ಚಿಪ್ಪಿನ ಬೆಲೆ ಇದ್ದಕ್ಕಿದ್ದಂತೆ ದುಪ್ಪಟ್ಟಾಗಿದೆ.
ತುಮಕೂರು ಜಿಲ್ಲೆಯ ರೈತ ಟಿ.ಎಸ್. ಲೋಕೇಶ್ ಅವರು 6 ಸಾವಿರ ಕೊಬ್ಬರಿ ಚಿಪ್ಪುಗಳನ್ನು ₹27 ಸಾವಿರಕ್ಕೆ ಮಾರಾಟ ಮಾಡಿ ಉತ್ತಮ ಲಾಭ ಗಳಿಸಿದ್ದಾರೆ. ಜಿಲ್ಲೆಯಲ್ಲೇ ಇಷ್ಟು ಹೆಚ್ಚಿನ ದರಕ್ಕೆ ಕೊಬ್ಬರಿ ಚಿಪ್ಪು ಮಾರಾಟವಾಗಿರುವುದು ಇದೇ ಮೊದಲ ಬಾರಿಗೆ ಎನ್ನಲಾಗಿದೆ.

ರೈತ ಲೋಕೇಶ್ ಮಾತನಾಡಿ, ಸಂಖ್ಯೆ ಆಧಾರದಲ್ಲಿ ಮಾರಾಟ ಮಾಡಿದರೆ ಪ್ರತಿ ಚಿಪ್ಪಿಗೆ ಸುಮಾರು ₹4.50 ಸಿಗುತ್ತಿದೆ. ತೂಕದ ಆಧಾರದ ಮೇಲೆ ವ್ಯಾಪಾರಿಗಳು ಕ್ವಿಂಟಲ್ಗೆ ₹3,600 ದರ ನೀಡುತ್ತಿದ್ದಾರೆ. ಹಿಂದೆ ಮೌಲ್ಯವಿಲ್ಲದ ವಸ್ತುವಾಗಿದ್ದ ಕೊಬ್ಬರಿ ಚಿಪ್ಪು ಇಂದು ಹೆಚ್ಚುವರಿ ಆದಾಯ ತಂದುಕೊಡುತ್ತಿದೆ ಎಂದು ತಿಳಿಸಿದ್ದಾರೆ.
ಕೇರಳ ಮತ್ತು ತಮಿಳುನಾಡಿನಲ್ಲಿ ಕೊಬ್ಬರಿ ಚಿಪ್ಪಿನ ಉತ್ಪಾದನೆ ಕಡಿಮೆಯಾಗಿರುವುದು ಹಾಗೂ ಎಳನೀರು ಮತ್ತು ತೆಂಗಿನಕಾಯಿಗೆ ಉತ್ತಮ ಬೆಲೆ ದೊರೆಯುತ್ತಿರುವ ಕಾರಣ ರೈತರು ಕೊಬ್ಬರಿ ಉತ್ಪಾದನೆಗೆ ಕಡಿಮೆ ಆದ್ಯತೆ ನೀಡುತ್ತಿರುವುದು ಚಿಪ್ಪಿನ ಲಭ್ಯತೆ ಕಡಿಮೆಯಾಗಲು ಕಾರಣವಾಗಿದೆ, ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿ ಬೆಲೆ ಏರಿಕೆಯಾಗಿದೆ ಎನ್ನಲಾಗುತ್ತಿದೆ.

ಜೋನಿಗರಹಳ್ಳಿಯ ಚಿಪ್ಪು ಖರೀದಿದಾರ ಪ್ರಸಾದ್ ಮಾತನಾಡಿ ಹಿಂದೆ ವಾರಕ್ಕೆ ಒಂದು ಟನ್ ಚಿಪ್ಪು ಖರೀದಿಸುತ್ತಿದ್ದೆವು. ಆದರೆ ಈಗ ತಿಂಗಳಿಗೆ ಒಂದು ಟನ್ ಚಿಪ್ಪು ಸಿಗುವುದೂ ಕಷ್ಟವಾಗಿದೆ. ಬೇಡಿಕೆ ಹೆಚ್ಚಿದ್ದರೂ ಪೂರೈಕೆ ಕಡಿಮೆಯಾಗಿರುವುದರಿಂದ ಬೆಲೆ ಏರಿಕೆಯಾಗುತ್ತಿದೆ ಎಂದು ಹೇಳಿದರು.
ಕೊಬ್ಬರಿ ಚಿಪ್ಪಿನಿಂದ ಇದ್ದಿಲು, ಸಕ್ರಿಯ ಕಾರ್ಬನ್, ನೀರು ಶುದ್ಧೀಕರಣ ಫಿಲ್ಟರ್ಗಳು, ಸೌಂದರ್ಯವರ್ಧಕ ಉತ್ಪನ್ನಗಳು, ಕರಟದ ಎಣ್ಣೆ ಸೇರಿದಂತೆ ಹಲವು ಕೈಗಾರಿಕಾ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ತುಮಕೂರಿನ ಸಂಸ್ಕರಣಾ ಘಟಕಗಳಲ್ಲಿ ಚಿಪ್ಪನ್ನು ಇದ್ದಿಲಾಗಿ ಪರಿವರ್ತಿಸಿ ಇತರೆ ರಾಜ್ಯಗಳಿಗೆ ಕಳುಹಿಸಲಾಗುತ್ತಿದ್ದು, ಅಲ್ಲಿಂದ ವಿವಿಧ ಕೈಗಾರಿಕೆಗಳಿಗೆ ಹಾಗೂ ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ.
ವ್ಯಾಪಾರಿಗಳ ಪ್ರಕಾರ ಪ್ರಸ್ತುತ ಬೇಡಿಕೆ ಹೆಚ್ಚಿದ್ದು ಪೂರೈಕೆ ಕಡಿಮೆ ಇರುವುದರಿಂದ ಕೊಬ್ಬರಿ ಚಿಪ್ಪಿನ ಬೆಲೆ ಮುಂದಿನ ದಿನಗಳಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ. ತ್ಯಾಜ್ಯವೆಂದು ಪರಿಗಣಿಸಲಾಗುತ್ತಿದ್ದ ಕೊಬ್ಬರಿ ಚಿಪ್ಪು ಇಂದು ರೈತರಿಗೆ ಹೆಚ್ಚುವರಿ ಆದಾಯದ ಮೂಲವಾಗಿ ಪರಿಣಮಿಸಿರುವುದು ತೆಂಗು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.
– ಶ್ರೀನಿವಾಸ್ ಕೊರಟಗೆರೆ.
