ಕೆ.ಆರ್.ಪೇಟೆ : ನಮ್ಮ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರೇ ಪಕ್ಷದ ನಿಜವಾದ ಶಕ್ತಿ ಮತ್ತು ಬೆನ್ನೆಲುಬಾಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಹೇಳಿದರು.
ಅವರು ತಾಲೂಕಿನ ಅಕ್ಕಿಹೆಬ್ಬಾಳು, ಕಿಕ್ಕೇರಿ ಹೋಬಳಿ ಕೇಂದ್ರಗಳಲ್ಲಿ ನಡೆದ ಎಸ್.ಐ.ಅರ್ ಕಾರ್ಯಕ್ರಮದ ಕಾಂಗ್ರೆಸ್ ಪಕ್ಷದ ಬಿ.ಎಲ್.ಎ-2 ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು ನಮ್ಮ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರೇ ಪಕ್ಷದ ನಿಜವಾದ ಶಕ್ತಿ ಮತ್ತು ಬೆನ್ನೆಲುಬು.

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಪ್ರಕ್ರಿಯೆಯು ಅತೀ ಮುಖ್ಯವಾದುದು. ನಮ್ಮ ಎಲ್ಲಾ ಬಿ.ಎಲ್.ಎ-2 ಕಾರ್ಯಕರ್ತರು ಅತೀ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ, ಯಾವುದೇ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗದಂತೆ ವಿಶೇಷ ಜಾಗೃತಿ ವಹಿಸಬೇಕು.
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, ಫಲಾನುಭವಿಗಳು ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು, ಮಕ್ಕಳ ಶಿಕ್ಷಣದ ಸೌಲಭ್ಯಗಳು ಹಾಗೂ ಉದ್ಯೋಗದ ಅವಕಾಶಗಳಿಂದ ವಂಚಿತರಾಗಬೇಕಾಗುತ್ತದೆ. ಈ ಅನ್ಯಾಯವನ್ನು ತಡೆಯುವುದು ನಮ್ಮ ಆದ್ಯ ಕರ್ತವ್ಯವಾಗಿದೆ.

ರಾಜಕೀಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕಿಂತ ತ್ಯಾಗ ಮತ್ತು ಬದ್ಧತೆ ಮುಖ್ಯ. ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು 3ವರ್ಷ ಮುಖ್ಯಮಂತ್ರಿ ಸ್ಥಾನವನ್ನೇ ಬಿಟ್ಟುಕೊಟ್ಟ ಉದಾಹರಣೆ ನಮ್ಮ ಮುಂದಿದೆ. ಅದೇ ರೀತಿ ನಮ್ಮ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧೀ ಅವರು ಪ್ರಧಾನ ಮಂತ್ರಿ ಹುದ್ದೆಯನ್ನು ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರನ್ನು ಹುದ್ದೆಗೆ ಕೂರಿಸಿ ಮಹಾತ್ಯಾಗಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದೇ ಬದ್ಧತೆಯನ್ನು ನಮ್ಮ ಕಾರ್ಯಕರ್ತರು ಮೈಗೂಡಿಸಿಕೊಳ್ಳಬೇಕು.
ಇದೇ ಸಂದರ್ಭದಲ್ಲಿ
ಈ ಕಾರ್ಯಕ್ರಮವನ್ನು ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್ ಅವರು ಉದ್ಘಾಟಿಸಿ ಮಾತನಾಡಿ ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ದಿಟ್ಟ ಸಲಹೆಗಳನ್ನು ನೀಡಿದರು. ಸಭೆಯ ನೇತೃತ್ವವನ್ನು ಕೆಪಿಸಿಸಿ ಸದಸ್ಯರಾದ ಕಿಕ್ಕೇರಿ ಸುರೇಶ್ ಅವರು ವಹಿಸಿದ್ದರು.
ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ರಾಜಾನಾಯಕ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಎನ್.ದಿವಾಕರ್, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ಮಾರ್ಗೋನಹಳ್ಳಿ ಸಣ್ಣ ನಿಂಗೇಗೌಡ, ಶ್ಯಾಮಣ್ಣ, ಸಾಸಲು ಈರಪ್ಪ, ಮಾದಾಪುರ ಡಾ. ರಾಮಕೃಷ್ಣೇಗೌಡ, ಅಘಲಯ ಮಂಜುನಾಥ್, ಜಾನೇಗೌಡ, ಗೋವಿಂದನಹಳ್ಳಿ ಕೆಂಪೇಗೌಡ, ಚೌಡೇನಹಳ್ಳಿ ದೇವರಾಜ್, ಚಂದ್ರಹಾಸ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲೋಲಾಕ್ಷಿ ಜಗದೀಶ್, ತಾ.ಪಂ.ಮಾಜಿ ಸದಸ್ಯೆ ವಿನೂತ ಸುರೇಶ್, ಎಸ್.ಐ.ಆರ್. ತಾಲ್ಲೂಕು ಸಂಯೋಜಕ ಆಕಾಶ್, ಅಕ್ಕಿಹೆಬ್ಬಾಳು ಜಯರಾಮನಾಯಕ್, ಸೇರಿದಂತೆ ಅನೇಕ ಮುಖಂಡರು ಹಾಗೂ ಬೂತ್ ಮಟ್ಟದ ಕಾರ್ಯಕರ್ತರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
