ಚನ್ನರಾಯಪಟ್ಟಣ, ಜು.23: ಚನ್ನರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜತ್ತೇನಹಳ್ಳಿ ರಾಮಚಂದ್ರ ಅವರ 55ನೇ ಜನ್ಮದಿನದ ಅಂಗವಾಗಿ ಜೆ.ಎಂ. ರಾಮಚಂದ್ರ ಅಭಿಮಾನಿಗಳ ಸಂಘದ ವತಿಯಿಂದ ತಾಲೂಕು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಾಗೂ ಬ್ರೆಡ್ ವಿತರಿಸುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮಾಜಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಯುವರಾಜ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಆಸ್ಪತ್ರೆಯ ಒಳರೋಗಿಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ರೋಗಿಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿ ಹಣ್ಣು ಹಾಗೂ ಬ್ರೆಡ್ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ಜತ್ತೇನಹಳ್ಳಿ ರಾಮಚಂದ್ರ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸ್ಥಾನಮಾನಗಳನ್ನು ಅಲಂಕರಿಸಲಿ ಎಂದು ಶುಭ ಹಾರೈಸಿದರು. ಅವರಿಗೆ ಉತ್ತಮ ಆರೋಗ್ಯ ಹಾಗೂ ಶ್ರವಣಬೆಳಗೊಳ ಕ್ಷೇತ್ರದ ಜನಸೇವೆಗೆ ಇನ್ನಷ್ಟು ಅವಕಾಶಗಳು ದೊರೆಯಲಿ ಎಂದು ಆಶಿಸಿದರು.
ಜನ್ಮದಿನವನ್ನು ಆಡಂಬರದಿಂದ ಆಚರಿಸುವ ಬದಲು ಸಮಾಜಮುಖಿ ಸೇವೆಯ ಮೂಲಕ ಆಚರಿಸುವ ಪರಂಪರೆಯನ್ನು ಕಾಂಗ್ರೆಸ್ ಕಾರ್ಯಕರ್ತರು ಮುಂದುವರಿಸಿಕೊಂಡು ಬಂದಿದ್ದು, ಸಾರ್ವಜನಿಕರ ಸೇವೆಯೇ ನಿಜವಾದ ಗೌರವ ಎಂಬ ಸಂದೇಶವನ್ನು ಈ ಕಾರ್ಯಕ್ರಮದ ಮೂಲಕ ಸಾರಿದರು.

ಕಾರ್ಯಕ್ರಮದಲ್ಲಿ ಯೂತ್ ಕಾಂಗ್ರೆಸ್ ಮುಖಂಡ ಯುವರಾಜ್, ಮಾರೇನಹಳ್ಳಿ ಚಂದ್ರು, ನೇರಳೆಕೆರೆ ಶ್ರೀನಿವಾಸ್, ಬೆಕ್ಕದ ಚೋಳನಹಳ್ಳಿ ಶ್ರೀಧರ್, ಸೋಮಶೇಖರ್ ಅಶ್ವಥ್, ಮಂಚೇನಹಳ್ಳಿ ಸಚಿನ್, ಕಗ್ಗೆರೆ ಯಶಸ್, ನುಗ್ಗೆಹಳ್ಳಿ ಕಿರಣ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ.
