ತುಮಕೂರು. ನೀಟ್ ಹಗರಣದ ಹೊಣೆ ಹೊತ್ತು ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಆಗ್ರಹಿಸಿ ಯುವಜನತೆ ದೆಹಲಿಯ ಜಂತರ್ ಮಂಥರ್ನಲ್ಲಿ ನಡೆಸುತ್ತಿರುವ ಹೋರಾಟ ಸರಿಯಾಗಿದ್ದು, ಪ್ರಧಾನಿ ಹಾಗೂ ರಾಷ್ಟ್ರಪತಿಗಳು ಕೂಡಲೇ ಅವರ ರಾಜೀನಾಮೆ ಪಡೆಯುವ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಮಾಜಿ ಶಾಸಕ ಡಾ. ಎಸ್. ರಫೀಕ್ ಅಹ್ಮದ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನೀಟ್ ಹಗರಣ ಕುರಿತಂತೆ ಯುವಜನರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದು, ಅವರ ಮೇಲೆ ದೆಹಲಿ ಪೊಲೀಸರು ನಡೆಸಿರುವ ಹಲ್ಲೆ ಖಂಡನೀಯ. ಕಳೆದ 10 ವರ್ಷಗಳಲ್ಲಿ ಹತ್ತಾರು ಬಾರಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಹಲವಾರು ಜನರು ತಮ್ಮ ಹತ್ತಾರು ವರ್ಷಗಳ ಕನಸು, ಹಲವು ವರ್ಷಗಳ ಶ್ರಮ ವ್ಯರ್ಥವಾಗಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. 2026ರ ನೀಟ್ ಪರೀಕ್ಷೆ ರದ್ದಾಗಿ, ಮರು ಪರೀಕ್ಷೆ ನಡೆದ ಪರಿಣಾಮ ಸುಮಾರು 22 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಕುಟುಂಬದವರಿಗೆ ಸರಕಾರ ಸೂಕ್ತ ಪರಿಹಾರ ಒದಗಿಸ ಬೇಕೆಂದು ಡಾ. ರಫೀಕ್ ಅಹ್ಮದ್ ಆಗ್ರಹಿಸಿದ್ದಾರೆ.
ದೆಹಲಿಯ ಜಂತರ್ ಮಂತರನಲ್ಲಿ ಪ್ರತಿಭಟನೆ ನಡೆಸುತ್ತಿರುವ ಯುವಜನರು ಯಾವ ಪಕ್ಷದ ಕಾರ್ಯಕರ್ತರು ಅಲ್ಲ. ಹಲವಾರು ವರ್ಷಗಳಿಂದ ಶಿಕ್ಷಣ ವ್ಯವಸ್ಥೆಯ ಮೇಲಾಗುತ್ತಿರುವ ಗದಾಪ್ರಹಾರ ಹಾಗೂ ಅವ್ಯವಸ್ಥೆಯನ್ನು ಖಂಡಿಸಿ, ಒಂದು ಸ್ಪಷ್ಟ ಉದ್ದೇಶದಿಂದ ಬೀದಿಗಿಳಿದು ಸರಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಹಾಗಾಗಿ ಕೇಂದ್ರ ಸರಕಾರ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಸರಕಾರದ ವಿರೋಧಿಗಳೆಂದು ಭಾವಿಸದೆ, ಅವರ ವಿರುದ್ದ ಹಾಕಿರುವ ಎಲ್ಲಾ ಕೇಸುಗಳನ್ನು ವಾಪಸ್ ಪಡೆಯಬೇಕು. ಸರಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಪ್ರತಿಭಟಿಸುತ್ತಿರುವ ಯುವಜನರ ಮೇಲೆ ದೇಶ ವಿರೋಧಿ ಕೃತ್ಯಗಳಂತಹ ಕೇಸುಗಳನ್ನು ದಾಖಲಿಸುವುದರಿಂದ ಅವರ ಭವಿಷ್ಯ ಹಾಳಾಗಲಿದೆ. ಹಾಗಾಗಿ ಸರಕಾರ ಕೂಡಲೇ ಪ್ರತಿಭಟನಾ ನಿರತರ ಮೇಲೆ ಹಾಕಿರುವ ಕೇಸುಗಳನ್ನು ವಾಪಸ್ ಪಡೆಯಬೇಕೆಂದು ಮಾಜಿ ಶಾಸಕರಾದ ಡಾ.ಎಸ್.ರಫೀಕ್ ಅಹ್ಮದ್ ಒತ್ತಾಯಿಸಿದ್ದಾರೆ.
– ಚಂದ್ರಚೂಡ ಕೆ.ಬಿ
