ಶ್ಲೋಕ – 24
ತಸ್ಮಾಚ್ಛಾಸ್ತ್ರಂ ಪ್ರಮಾಣಂ ತೇ ಕಾರ್ಯಾಕಾರ್ಯವ್ಯವಸ್ಥಿತೌ ।
ಜ್ಞಾತ್ವಾ ಶಾಸ್ತ್ರವಿಧಾನೋಕ್ತಂ ಕರ್ಮ ಕರ್ತುಮಿಹಾರ್ಹಸಿ ॥೨೪॥
ತಸ್ಮಾತ್ ಶಾಸ್ತ್ರಮ್ ಪ್ರಮಾಣಂ ತೇ ಕಾರ್ಯ ಅಕಾರ್ಯ ವ್ಯವಸ್ಥಿತೌ ।
ಜ್ಞಾತ್ವಾ ಶಾಸ್ತ್ರ ವಿಧಾನ ಉಕ್ತಮ್ ಕರ್ಮ ಕರ್ತುಮ್ ಇಹ ಅರ್ಹಸಿ –ಅದರಿಂದ ಬೇಕು-ಬೇಡಗಳ ತೀರ್ಮಾನಕ್ಕೆ ನಿನಗೆ ಶಾಸ್ತ್ರವೆ ಪ್ರಮಾಣ. ಶಾಸ್ತ್ರದ ಕಟ್ಟಳೆಯನ್ನರಿತು ಇಲ್ಲಿ ಕರ್ಮ ಮಾಡಲೆಳಸು.
ಎಲ್ಲ ಬೇಕು ಬೇಡಗಳಿಗೆ ಶಾಸ್ತ್ರವೇ ಪ್ರಮಾಣ. ಆದ್ದರಿಂದ ನಾವು ಶಾಸ್ತ್ರದಲ್ಲಿ ಹೇಳುವುದನ್ನು ಮೊದಲು ನಂಬಬೇಕು. ಆಗ ಅದನ್ನು ತಿಳಿಯಲು ಸಾಧ್ಯವಾಗುತ್ತದೆ. ಶಾಸ್ತ್ರದಲ್ಲಿ ಹೀಗೆ ಮಾಡು, ಹೀಗೆ ಮಾಡಬೇಡ ಎಂದು ಹೇಳಿರುವವರು- ಅದರಿಂದಾಗುವ ಪರಿಣಾಮವನ್ನು ಸಾಕ್ಷಾತ್ಕರಿಸಿಕೊಂಡ ಜ್ಞಾನಿಗಳು. ಆದ್ದರಿಂದ ಕರ್ಮದ ಕಟ್ಟಳೆಯನ್ನರಿತು ಕರ್ಮ ಮಾಡು ಎನ್ನುತ್ತಾನೆ ಕೃಷ್ಣ.
ಇಲ್ಲಿ ಶಾಸ್ತ್ರ ಎಂದರೆ ನಾಲ್ಕು ವೇದಗಳು ಮತ್ತು ಅದಕ್ಕೆ ಪೂರಕವಾದ ಪಂಚರಾತ್ರ, ಮಹಾಭಾರತ, ಮೂಲರಾಮಾಯಣ, ಮತ್ತು ಹದಿನೆಂಟು ಪುರಾಣಗಳು. ಇವು ಬಿಟ್ಟು ಇತರ ಯಾವುದನ್ನೂ ಪೂರ್ಣವಾಗಿ ಪ್ರಮಾಣವಾಗಿರಿಸಲು ಸಾಧ್ಯವಿಲ್ಲ.
