ಹಾಸನ, ಜು.29: ಜೀವನದಲ್ಲಿ ಯಶಸ್ಸು ಸಾಧಿಸಬೇಕಾದರೆ ವ್ಯಕ್ತಿಯ ಮುಂದೆ ಸ್ಪಷ್ಟ ಗುರಿ ಇರಬೇಕು ಮತ್ತು ಹಿಂದೆ ಸದ್ಗುರು ಇರಬೇಕು. ಗುರುವಿಲ್ಲದೆ ಜ್ಞಾನಕ್ಕೂ, ಜೀವನಕ್ಕೂ ಯಾವುದೇ ರೀತಿಯ ಅರ್ಥವಿಲ್ಲ ಎಂದು ಹಾಸನದ ತಣ್ಣೀರುಹಳ್ಳ ಮಠದ ಶ್ರೀ ವಿಜಯಕುಮಾರ ಮಹಾಸ್ವಾಮೀಜಿಗಳು ಅಭಿಪ್ರಾಯಪಟ್ಟರು.
ತಣ್ಣೀರುಹಳ್ಳ ಮಠದಲ್ಲಿ ಬುಧವಾರ ಬೆಳಿಗ್ಗೆ ನಡೆದ ವಿಶೇಷ ಇಷ್ಟಲಿಂಗ ಪೂಜೆಯ ನಂತರ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಷ್ಟಲಿಂಗ ಪೂಜೆಯ ವಿಧಾನ, ಅದರ ಮಹತ್ವ ಹಾಗೂ ಲಿಂಗಪೂಜೆ ಆರಂಭವಾದ ಹಿನ್ನೆಲೆಯನ್ನು ವಿವರಿಸಿದರು.
“ನಮ್ಮ ಮೊದಲ ಗುರು ತಾಯಿಯೇ. ತಾಯಿ ಜೀವನವನ್ನು ನೀಡಿದರೆ, ಗುರು ಜೀವನವನ್ನು ಸಾರ್ಥಕಗೊಳಿಸುವ ಜ್ಞಾನವನ್ನು ನೀಡುತ್ತಾನೆ. ‘ಗು’ ಎಂದರೆ ಕತ್ತಲೆ, ‘ರು’ ಎಂದರೆ ಬೆಳಕು. ಅಜ್ಞಾನವೆಂಬ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ನೀಡುವವನೇ ಗುರು” ಎಂದು ಅವರು ಹೇಳಿದರು.
ಸನಾತನ ಸಂಸ್ಕೃತಿಯಲ್ಲಿ ಗುರುವನ್ನು ದೇವರ ಸಮಾನವೆಂದು ಪರಿಗಣಿಸಲಾಗಿದ್ದು, ಗುರುವನ್ನು ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರ ಸ್ವರೂಪವೆಂದು ಗೌರವಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಗುರು ಪೂರ್ಣಿಮೆಯ ಮಹತ್ವವನ್ನು ವಿವರಿಸಿದ ಶ್ರೀಗಳು, ಭಾರತದಲ್ಲಿನ ಎಲ್ಲಾ ಋತುಗಳಿಗೆ ತಮ್ಮದೇ ಆದ ವಿಶೇಷತೆ ಇದ್ದರೂ, ಮಳೆಗಾಲದಲ್ಲಿ ಆಚರಿಸಲಾಗುವ ಗುರು ಪೂರ್ಣಿಮೆಗೆ ವಿಶಿಷ್ಟ ಸ್ಥಾನವಿದೆ. ಈ ನಾಲ್ಕು ತಿಂಗಳಲ್ಲಿ ಹೆಚ್ಚು ಬಿಸಿಲು ಅಥವಾ ಚಳಿ ಇರುವುದಿಲ್ಲ. ಅಧ್ಯಯನ, ಬೋಧನೆ, ಸಾಧನೆ ಹಾಗೂ ಆಧ್ಯಾತ್ಮಿಕ ಅಭ್ಯಾಸಕ್ಕೆ ಇದು ಅತ್ಯಂತ ಅನುಕೂಲಕರ ಕಾಲವಾಗಿರುವುದರಿಂದ ಗುರುಗಳು ಈ ಅವಧಿಯನ್ನು ಶಿಷ್ಯರಿಗೆ ಜ್ಞಾನ, ಶಾಂತಿ, ಭಕ್ತಿ ಹಾಗೂ ಯೋಗಶಕ್ತಿಯನ್ನು ಬೋಧಿಸಲು ಆಯ್ಕೆ ಮಾಡುತ್ತಾರೆ ಎಂದರು.

ಗುರು ಪೂರ್ಣಿಮೆಯಂದು ಗುರುಗಳಿಗೆ, ಗುರು ಸಮಾನರಾದವರಿಗೆ ಹಾಗೂ ಪೋಷಕರಿಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವರ್ಷದ ಇತರ ಎಲ್ಲಾ ಪೂರ್ಣಿಮೆಗಳಿಗಿಂತ ಗುರು ಪೂರ್ಣಿಮೆಯು ವಿಶೇಷ ಮಹತ್ವವನ್ನು ಹೊಂದಿದ್ದು, ಈ ದಿನ ಗುರುಭಕ್ತಿ ಹಾಗೂ ಪೂಜೆಯಿಂದ ಅಪಾರ ಪುಣ್ಯಫಲ ದೊರೆಯುತ್ತದೆ. ಪ್ರತಿಯೊಬ್ಬರೂ ಗುರುಗಳನ್ನು ಆರಾಧಿಸಿ ತಮ್ಮ ಜೀವನವನ್ನು ಅರ್ಥಪೂರ್ಣವಾಗಿಸಿಕೊಳ್ಳಬೇಕು ಎಂದು ಶ್ರೀ ವಿಜಯಕುಮಾರ ಮಹಾಸ್ವಾಮೀಜಿಗಳು ಭಕ್ತರಿಗೆ ಕರೆ ನೀಡಿದರು.
– ಕುಮಾರಸ್ವಾಮಿ ಎಂ.ಎನ್.
