ರಾಮನಾಥಪುರ, ಜು.29: ರಾಜ್ಯದ ಹಲವೆಡೆ ಮಳೆ ಕೊರತೆಯಿಂದ ಜನತೆ ಸಂಕಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ರಾಮನಾಥಪುರದ ದಕ್ಷಿಣ ಕಾಶಿ ಖ್ಯಾತಿಯ ಚತುರ್ಯುಗಮೂರ್ತಿ ಶ್ರೀ ರಾಮೇಶ್ವರಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಮೂರು ದಿನಗಳ ಪರ್ಜನ್ಯ ಜಪ ಹಾಗೂ ಸೋಮಸೂತ್ರ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ಶಾಸಕರಾದ ಎ. ಮಂಜು ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಈ ವರ್ಷ ಬರ ಪರಿಸ್ಥಿತಿಯಿಂದ ಜನತೆ ಸಂಕಷ್ಟದಲ್ಲಿದ್ದು, ಕಾವೇರಿ ನದಿ ದಂಡೆಯಲ್ಲಿರುವ ಚತುರ್ಯುಗಮೂರ್ತಿ ಶ್ರೀ ರಾಮೇಶ್ವರಸ್ವಾಮಿ ಮೂಲ ಲಿಂಗಕ್ಕೆ ಸೋಮಸೂತ್ರ ಕಟ್ಟಿದರೆ ಉತ್ತಮ ಮಳೆಯಾಗುತ್ತದೆ ಎಂಬ ಪೂರ್ವಿಕರ ನಂಬಿಕೆಯಂತೆ ಗ್ರಾಮಸ್ಥರು, ಭಕ್ತರು ಹಾಗೂ ವೈದಿಕರು ಸೇರಿ ಕಾವೇರಿ ನದಿಯಿಂದ ನೀರನ್ನು ತಂದು ಮೂಲ ಲಿಂಗದ ಮಟ್ಟಕ್ಕೆ ತುಂಬಿಸಿ ಮೂರು ದಿನಗಳ ಕಾಲ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಪರ್ಜನ್ಯ ಜಪವನ್ನು ನೆರವೇರಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಮಳೆ ಅಭಾವದಿಂದ ಕಂಗಾಲಾಗಿರುವ ಜನತೆಗೆ ವರುಣ ದೇವರ ಕೃಪೆಯಿಂದ ಉತ್ತಮ ಮಳೆಯಾಗಿ ನದಿಗಳು, ಕಾಲುವೆಗಳು ಹಾಗೂ ಕೆರೆಕಟ್ಟೆಗಳು ತುಂಬಿ ಕೃಷಿ ಸಮೃದ್ಧಿಯಾಗಲಿ ಎಂದು ಶ್ರೀ ರಾಮೇಶ್ವರಸ್ವಾಮಿಯಲ್ಲಿ ಪ್ರಾರ್ಥಿಸಿದರು.
ಪುರಾಣ ಪ್ರಸಿದ್ಧಿಯ ಪ್ರಕಾರ, ಶ್ರೀರಾಮ ಪರಿವಾರ ಈ ಕ್ಷೇತ್ರಕ್ಕೆ ಆಗಮಿಸಿದ್ದರಿಂದ ಈ ದೇವಾಲಯಕ್ಕೆ ವಿಶೇಷ ಪಾವಿತ್ರ್ಯವಿದೆ. ಇದೇ ಕಾರಣದಿಂದ ಭಕ್ತರು ಈ ಕ್ಷೇತ್ರವನ್ನು ಅತ್ಯಂತ ಭಕ್ತಿಭಾವದಿಂದ ಆರಾಧಿಸುತ್ತಾರೆ.
ಜುಲೈ 27ರಿಂದ 29ರವರೆಗೆ ನಡೆದ ಮೂರು ದಿನಗಳ ಕಾರ್ಯಕ್ರಮದಲ್ಲಿ ನಾಂದಿ ಪೂಜೆ, ಏಕಾದಶ ರುದ್ರಾಭಿಷೇಕ, ಪರ್ಜನ್ಯ ಜಪ, ನವಗ್ರಹ ಜಪ, ಗಣಪತಿ ಜಪ ಹಾಗೂ ಗಣಪತಿ ಹೋಮ ಸೇರಿದಂತೆ ವಿವಿಧ ವೈದಿಕ ವಿಧಿವಿಧಾನಗಳು ನೆರವೇರಿದವು. ಪ್ರತಿದಿನ ಸಂಜೆ ಇಂದ್ರಾಕ್ಷಿ ಅಮ್ಮನವರಿಗೆ ವಿಶೇಷ ಜಪ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು.

ವೈದಿಕ ಸೋಮನಹಳ್ಳಿ ಪ್ರಕಾಶ್ ಅವರ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಋತ್ವಿಜರು ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದರು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಳೆ ಹಾಗೂ ಲೋಕಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
– ಕುಮಾತಸ್ವಾಮಿ ಎಂ.ಎನ್.
