ರಾಮನಾಥಪುರ, ಆ. 4: ಕಟ್ಟೇಪುರ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ ಶಾಸಕ ಎ. ಮಂಜು ಕಾವೇರಿ ನದಿಗೆ ಬಾಗಿನ ಅರ್ಪಿಸಿ, ಅಣೆಕಟ್ಟೆಯ ಗೇಟ್ಗಳಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬಲದಂಡೆ ಹಾಗೂ ಎಡದಂಡೆ ನಾಲೆಗಳಿಗೆ ನೀರು ಹರಿಸಲು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಟ್ಟೇಪುರ ಅಣೆಕಟ್ಟೆಯ ಎರಡೂ ನಾಲೆಗಳ ಮೂಲಕ ಅಚ್ಚುಕಟ್ಟು ಪ್ರದೇಶದ ಕೃಷಿ ಭೂಮಿಗಳಿಗೆ ನೀರು ಹರಿಸಲಾಗುತ್ತಿದ್ದು, ರೈತರು ನೀರನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಬೆಳೆ ಬೆಳೆದು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮೈಸೂರು ಮಹಾರಾಜರ ದೂರದೃಷ್ಟಿಯಿಂದ ನಿರ್ಮಾಣವಾದ ಕಾವೇರಿ ನದಿಯ ಮೊದಲ ಅಣೆಕಟ್ಟಾದ ಕೃಷ್ಣರಾಜ ಸಾಗರ (ಕೆಆರ್ಎಸ್) ಹಾಗೂ ಕಟ್ಟೇಪುರ ಅಣೆಕಟ್ಟೆ ಸೇರಿದಂತೆ ನೀರಾವರಿ ಯೋಜನೆಗಳಿಂದ ಅರಕಲಗೂಡು, ಪಿರಿಯಾಪಟ್ಟಣ ಮತ್ತು ಕೃಷ್ಣರಾಜನಗರ ಭಾಗದ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ದೊರೆತಿದೆ ಎಂದು ಹೇಳಿದರು.
ಈ ವರ್ಷ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ನಿಧಾನವಾಗಿದ್ದರೂ ಜಲಾಶಯಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೈಸೂರು ರಾಜರು ಕಟ್ಟೇಪುರ ಗ್ರಾಮದ ಸಮೀಪ ಕಾವೇರಿ ನದಿಗೆ ಮಿನಿ ಅಣೆಕಟ್ಟೆ ನಿರ್ಮಿಸಿ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದರು. ಈ ಅಣೆಕಟ್ಟೆಗೆ ಇದುವರೆಗೆ ಒಂದು ಬಾರಿ ಮಾತ್ರ ನವೀಕರಣ ಕಾಮಗಾರಿ ನಡೆದಿದ್ದು, ಎಡದಂಡೆ ನಾಲೆಯಿಂದ ವಿದ್ಯುತ್ ಉತ್ಪಾದನೆಯೂ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಕಾವೇರಿ ನದಿಗೆ ಕೊಡಗು ಜಿಲ್ಲೆಯಿಂದ ಹರಿಯುವ ನೀರಿನ ಜೊತೆಗೆ ಹಾರಂಗಿ ಜಲಾಶಯದ ನೀರು ಕೂಡ ಸೇರುತ್ತದೆ. ವಿಶೇಷವಾಗಿ ಕಟ್ಟೇಪುರ ಭಾಗದಲ್ಲಿ ಕಾವೇರಿ ನದಿ ಪಶ್ಚಿಮಾಭಿಮುಖವಾಗಿ ಹರಿಯುವುದು ವಿಶಿಷ್ಟವಾಗಿದೆ ಎಂದು ಹೇಳಿದ ಅವರು, ನೀರಾವರಿ ಇಲಾಖೆ ಅಧಿಕಾರಿಗಳು ನಾಲೆಯ ಕೊನೆಯ ಭಾಗದವರೆಗೂ ನೀರು ಸಮರ್ಪಕವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಹಾರಂಗಿ ಮಹಾಮಂಡಳದ ಅಧ್ಯಕ್ಷ ಎಸ್.ಸಿ. ಚೌಡೇಗೌಡ, ತಾ.ಪಂ. ಮಾಜಿ ಸದಸ್ಯ ಇಮ್ರಾನ್ ಮೊಕ್ತಾರ್, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಮಹೇಶ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್ಮೂರ್ತಿ, ಸಹಾಯಕ ಇಂಜಿನಿಯರ್ ವೆಂಕಟೇಶ್, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
– ಕುಮಾರಸ್ವಾಮಿ ಎಂ.ಎನ್.
