ಹಾಸನ, ಆ.5: ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರ, ಧಾರ್ಮಿಕ ಮೌಲ್ಯಗಳು ಹಾಗೂ ಮಾನವೀಯತೆಯನ್ನು ಬೆಳೆಸುವುದು ಅತ್ಯಗತ್ಯ ಎಂದು ಹಾಸನ ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಗೌರವಾಧ್ಯಕ್ಷರು ಹಾಗೂ ಅರಕಲಗೂಡು ದೊಡ್ಡಮಠದ ಮಠಾಧೀಶರಾದ ಶ್ರೀ ಮಲ್ಲೀಕಾರ್ಜುನ ಸ್ವಾಮೀಜಿ ಹೇಳಿದರು.
ಹಾಸನ ತಾಲ್ಲೂಕಿನ ಕಟ್ಟಾಯ ಸಮೀಪದ ಬ್ಯಾಡರಹಳ್ಳಿ ಗ್ರಾಮದ ಗ್ರಾಮದೇವತೆ ಶ್ರೀ ಕೆರೆಕೋಡಿಯಮ್ಮ ದೇವಾಲಯದಲ್ಲಿ ನಡೆದ 48ನೇ ದಿನದ ವಿಶೇಷ ಪೂಜಾ ಮಹೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧಾರ್ಮಿಕ ಪೂಜೆ, ಹೋಮ-ಹವನಗಳು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ಸಾಧನಗಳಾಗಿವೆ ಎಂದರು.
ಪ್ರತಿ ಗ್ರಾಮಕ್ಕೂ ಗ್ರಾಮದೇವತೆಗಳಿದ್ದು, ಜನರು ಭಕ್ತಿ-ಶ್ರದ್ಧೆಯಿಂದ ಆರಾಧಿಸುತ್ತಿದ್ದಾರೆ. ದೇವಸ್ಥಾನ ನಿರ್ಮಿಸಿ 48 ದಿನಗಳ ಕಾಲ ಪೂಜೆ ಸಲ್ಲಿಸಿರುವುದು ಗ್ರಾಮಸ್ಥರ ಒಗ್ಗಟ್ಟು ಮತ್ತು ಧಾರ್ಮಿಕ ನಂಬಿಕೆಗೆ ಸಾಕ್ಷಿಯಾಗಿದೆ. ಪೂರ್ವಜರಿಂದ ಬಂದಿರುವ ಆಚಾರ-ವಿಚಾರ, ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಾಸನ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಭಾರತ ಧಾರ್ಮಿಕ ನಂಬಿಕೆಗಳ ದೇಶವಾಗಿದ್ದು, ಧರ್ಮ ಮತ್ತು ಸಂಸ್ಕೃತಿಯ ಉಳಿವಿಗೆ ಎಲ್ಲರೂ ಶ್ರಮಿಸಬೇಕು ಎಂದರು. ಮಕ್ಕಳಲ್ಲಿ ಧಾರ್ಮಿಕ ಮೌಲ್ಯಗಳ ಜೊತೆಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಆದರ್ಶ ನಾಗರಿಕರನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.
ಉತ್ಸವದ ಅಂಗವಾಗಿ ಶ್ರೀ ಕೆರೆಕೋಡಿಯಮ್ಮ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಬೆಳಗ್ಗೆಯಿಂದಲೇ ಹೋಮ-ಹವನ, ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ನಂತರ ಭಕ್ತರಿಗೆ ಮಹಾಪ್ರಸಾದ (ದಾಸೋಹ) ವ್ಯವಸ್ಥೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಧು, ಗುತ್ತಿಗೆದಾರ ರೇವಣ್ಣ, ಬಿ. ದಯಾನಂದ್, ಅರುಣ್, ಬಸವರಾಜ್, ಗ್ರಾಮದ ಹಿರಿಯರಾದ ಬಿ.ಆರ್. ಶಿವಪ್ಪ, ಸಂಗಬಸಪ್ಪ, ನಿವೃತ್ತ ಶಿಕ್ಷಕರಾದ ಶಿವಬಸಪ್ಪ, ಶಿವಣ್ಣ, ಬಸಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಪ್ಪ, ಸ್ವಾಮಣ್ಣ, ಮಹದೇವ್ ಸೇರಿದಂತೆ ಬ್ಯಾಡರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು, ಮಹಿಳೆಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
– ಕುಮಾರಸ್ವಾಮಿ ಎಂ.ಎನ್.
