ಒಂದಷ್ಟು ದೂರ ನಡೆದಿರಬಹುದು. ಮತ್ತೊಂದು ಗೊಂದಲದಲ್ಲಿ ಮುಳುಗಬೇಕಾದ ಸಂದರ್ಭ ಬಂತು. ಈ ಜೀಪ್, ಲಾರಿ ಹಳವಂಡದಲ್ಲಿ ನಾನೆಷ್ಟು ದೂರ ಬಂದಿದ್ದೇನೆ? ಆ ದನ ತಿರುಗುವ ದಾರಿ ಹಿಂದಾಯಿತೋ? ಮುಂದೆ ಸಿಗಲಿದೆಯೋ? ಸ್ಥಳೀಯರ ಲೆಕ್ಕಾಚಾರದಂತೆ ‘ಇಲ್ಲೇ ಸ್ವಲ್ಪ ದೂರ’ ಎಂದರೆ ಮಿನಿಮಮ್ ಒಂದು ಮೈಲಿ. ಹಾಗಾದರೆ ಇನ್ನೆಷ್ಟು ದೂರ ನಡೆಯಬೇಕೋ? ಎಂದೆಣಿಸಿಕೊಂಡು, ಆಗದ್ದಾಗಲಿ ನಡೆದರೆ ಸಂಜೆಯೊಳಗೆ ಸಕಲೇಶಪುರವಾದರೂ ಸಿಗುವುದಲ್ಲ ಎಂಬ ಹುಂಬ ನಂಬಿಕೆಯೊಂದಿಗೆ ನಡೆಯತೊಡಗಿದೆ. ಅಷ್ಟರಲ್ಲಾಗಲೇ ಮುಂಜಾನೆಯ ಚುಮುಚುಮು ಬೆಳಕು ಚೆನ್ನಾಗಿಯೇ ಹರಡತೊಡಗಿತ್ತು.
ಅಂತೂ ಇಂತೂ ಆ ರಸ್ತೆ ಬದಿಯ ಮಾರ್ಗದರ್ಶಿಗಳು ಹೇಳಿದ್ದ ‘ದನ ತಿರುಗುವ ದಾರಿ’ ಗೋಚರಿಸಿದಾಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೂ ಗೊಂದಲ ಮುಗಿಯಲೇ ಇಲ್ಲ. ಅದು ಅವರು ಹೇಳಿದ ದಾರಿಯೋ ಅಥವಾ ಇದೇ ಬೇರೆಯದೋ ಎಂಬುದು ತಿಳಿಯಲಿಲ್ಲ. ತಣ್ಣೀರಲ್ಲಿ ಬಿದ್ದವನಿಗೆ ಮಳೆಯೇನು, ಚಳಿಯೇನು? ಅಂದುಕೊಂಡು, ಅದೇನಾಗುತ್ತೋ ನೋಡೋಣವೆಂದು, ಕೈಕಾಲುಗಳು ‘ನಮಗಿನ್ನು ಸಾಧ್ಯವೇ ಇಲ್ಲ’ವೆಂದು ಗೋಗರೆಯುತ್ತಿದ್ದರೂ, ದೇಹದ ಚೈತನ್ಯ ಕುಂದುತ್ತಿದ್ದರೂ, ಹೇಗಾದರೂ ಮಾಡಿ ರೈಲು ಹಳಿ ತಲುಪಬೇಕೆಂದು ಅಕ್ಷರಶಃ ಅಭೇದ್ಯ ಅರಣ್ಯದೊಳಗಿನ ದನ ತುಳಿದ ದಾರಿಯಲ್ಲಿ ಅಮೂಲ್ಯವಾದದ್ದೇನನ್ನೋ ಹುಡುಕುವಂತೆ ಹಲ್ಲುಕಚ್ಚಿಕೊಂಡು ಮುಂದಡಿಯಿಡತೊಡಗಿದೆ.
ಮಳೆಗಾಲದಲ್ಲಿ ಮೇಲಿನ ಗುಡ್ಡದಿಂದ ನೀರು ಹರಿದು ಬಂದು ರಸ್ತೆಯಡಿಯ ಮೋರಿಯನ್ನು ಹಾದು ಪ್ರಪಾತಕ್ಕೆ ಹರಿಯುವ ಝರಿ, ಈಗ ಬೇಸಿಗೆಯಲ್ಲಿ ಒಣಗಿ, ದನ-ಜನರು ತಿರುಗುವ ಹಾದಿಯಾಗಿ ಉಪಯೋಗಿಸಲ್ಪಡುವಂತೆ ಕಾಣುತ್ತಿತ್ತು. ಹಾದಿಯ ತುಂಬಾ ನದಿಪಾತ್ರದಲ್ಲಿರುವ ಉರುಟುಗಲ್ಲುಗಳೇ ತುಂಬಿದ್ದು, ದನಕರುಗಳ ನಡೆದಾಟದಿಂದ ಎಲ್ಲೆಡೆಯೂ ಕೆಸರು ತುಂಬಿಹೋಗಿತ್ತು. ಇದು ಅದೇ ದಾರಿ ಹೌದೋ, ಅಲ್ಲವೋ? ಅಂತೂ ಈ ಹೆಬ್ಬಾವಿನಂಥ ಹೆದ್ದಾರಿಯಿಂದ ತಪ್ಪಿಸಿಕೊಳ್ಳೋಣವೆಂದು ಕೆಸರಿನ ಹಾದಿಯೊಳಗೆ ಕಾಲಿರಿಸಿ, ಉರುಟುಗಲ್ಲುಗಳ ಮೇಲೆ ನೆಗೆನೆಗೆದು ಕೆಸರಿನಿಂದ ಪಾರಾಗುವುದಿರಲಿ, ಇನ್ನೂ ಹೆಚ್ಚೇ ಕೆಸರನ್ನು ಹಾರಿಸಿಕೊಂಡು ನಡೆಯತೊಡಗಿದೆ.
ಬೆಳಗಿನ ಬಿಸಿಲಿಗೆ ಇಬ್ಬನಿ ಮಿಂದು ಚರಚರನೆ ಮಿರುಗುತ್ತಿದ್ದ ಈಚಲಗರಿಗಳ ಮೃದುನಿನಾದ ಕಿವಿಗೆ ಸೋಕಿ ಏನೋ ಒಂದು ರೀತಿಯ ನೆಮ್ಮದಿ ದೊರಕತೊಡಗಿತು. ಕಣ್ಣು ಹಾಯಿಸಿದಷ್ಟು ದೂರವರೆಗೆ ಹರಡಿದ್ದ ಈಚಲಹರದಲ್ಲಿ ಅನೇಕ ಕಡೆ ನನಗೆ ಕಾಡುಮೊಲಗಳು, ಪರ್ಲಕ್ಕಿಗಳ ದರ್ಶನವಾಯಿತು. ನನ್ನನ್ನು ಕಂಡಕೂಡಲೇ ಪುಳಕ್ಕನೆ ನೆಗೆದು ಕಣ್ಮರೆಯಾಗುತ್ತಿದ್ದ ಮೊಲಗಳು, ಗಾಬರಿಗೊಂಡು ಲಂಟಾನದೊಳಗೆ ನುಗ್ಗುತ್ತಿದ್ದ ಮುಂಗುಸಿಗಳು, ಗಲಿಬಿಲಿ ಮಾಡುತ್ತಾ ಚೆದುರಿಹೋಗುತ್ತಿದ್ದ ಪರ್ಲಕ್ಕಿಗಳು ನನ್ನ ಆಯಾಸವನ್ನು ಆದಷ್ಟೂ ಕಡಿಮೆ ಮಾಡಿದವು.
ಹರ ಏರಿ ಇಳಿಯುತ್ತಿದ್ದವನಿಗೆ, ನಾನು ನಡೆಯುತ್ತಿದ್ದ ದಾರಿ ಮುಂದಿನ ತಿರುವಿನಲ್ಲಿ ಕವಲಾಗಿದ್ದು ಸ್ಪಷ್ಟವಾಗಿ ಗೋಚರಿಸಿತು. ಚುಮುಚುಮು ಬೆಳಕು ವಿಸ್ತಾರವಾಗತೊಡಗಿತು. ಚೆನ್ನಾಗಿ ಬೆಳಕು ಹರಿಯುತ್ತಿದ್ದಂತೆ ವಾಚಿನೆಡೆಗೆ ನೋಡುತ್ತೇನೆ; ಆಗಲೇ ಬೆಳಗಿನ ಆರೂವರೆ ಆಗಿತ್ತು. ಅಯ್ಯೋ, ಎಲ್ಲಾದರೂ ನಮ್ಮ ನ್ಯಾಕ್ ತಂಡ ಮುಂದಾದರೆ ಕಷ್ಟವಾಗುತ್ತಲ್ಲ ಎಂದು ಏದುಸಿರು ಬರುತ್ತಿದ್ದರೂ, ನಿಂತರೆ ಕೆಲಸ ಕೆಡುತ್ತದೆ ಎಂದು ಒಂದೇ ವೇಗದಲ್ಲಿ ನಡೆಯತೊಡಗಿದೆ.
ವಿಶಾಲವಾದ ಈಚಲಹರವೊಂದು ಎದುರಾಯಿತು. ನಾನು ನಡೆಯುತ್ತಿದ್ದ ಹಾದಿಯು ಈಚಲಗುತ್ತಿಗಳ ನಡುವೆ ಎರಡು-ಮೂರು ತಿರುವುಗಳನ್ನು ತೆಗೆದುಕೊಳ್ಳುವುದು, ಸ್ವಲ್ಪ ದೂರ ನಡೆದ ನಂತರ ಇನ್ನೊಂದು ಯಾವುದೋ ಕಾಲ್ದಾರಿ ಬಂದು ಸೇರುವುದು—ಒಟ್ಟಿನಲ್ಲಿ ನಾನು ಎಲ್ಲಿ, ಯಾಕೆ, ಎತ್ತಕಡೆ ನಡೆಯುತ್ತಿದ್ದೇನೆ ಎಂಬುದನ್ನೇ ಮರೆಸುವಂತೆ ದೊಡ್ಡ ಗೊಂದಲವನ್ನೇ ಸೃಷ್ಟಿಸಿತ್ತು. ಎತ್ತರದಿಂದ, ಅಂದರೆ ಆಗಸದ ಅಂತರಾಳದಿಂದ ನೋಡಿದರೆ, ಈ ಕಾಲ್ದಾರಿಗಳ ಜಾಲ ಹೆಚ್ಚೂಕಡಿಮೆ ಜೇಡರಬಲೆಯಂತೆಯೇ ಕಾಣುತ್ತಿತ್ತೇನೋ.
ಈಚಲಗುತ್ತಿಯೊಂದರಿಂದ ಮೊಲಗಳೆರಡು ಪಣಕ್ಕನೇ ಚಿಮ್ಮಿ ಆ ದಾರಿಗಳಲ್ಲಿ ಯಾವುದೋ ಒಂದರೊಳಗೆ ನುಸುಳಿ ಎತ್ತಲೋ ನಾಪತ್ತೆಯಾದವು. ತೆಳ್ಳನೆಯ ತಿಳಿಬಿಸಿಲಿಗೆ ನವಿಲುಗಳ ಗುಂಪೊಂದು ಕತ್ತುಗಳನ್ನೆತ್ತಿ ಅತ್ತಿತ್ತ ಕಣ್ಣು ಹಾಯಿಸುತ್ತಾ ಕಿವಿ ಗಡಚಿಕ್ಕುವಂತೆ ಕೂಗುತ್ತಿದ್ದವು.
ಈಚಲಹರದಲ್ಲಿ ಅಲ್ಲಲ್ಲಿ ಇದ್ದ ಚೊಟ್ಟೆಹಣ್ಣಿನ ಗಿಡಗಳಲ್ಲಿದ್ದ ಬಿಳಿಬಣ್ಣದ ಚೊಟ್ಟೆಹಣ್ಣನ್ನು ಮುಳ್ಳುಗಳೆಡೆಯಿಂದ ನಿಧಾನವಾಗಿ ಬಿಡಿಸಿಕೊಂಡೆ. ಬಾಯೊಳಗಿಡುತ್ತಿದ್ದಂತೆ ಕರಗಿಯೇ ಹೋಗುತ್ತವೆಯೆನಿಸುತ್ತಿದ್ದ ಹಣ್ಣುಗಳು ಇನ್ನೂ ತಿನ್ನುವ ಆಸೆ ಹುಟ್ಟಿಸಿದರೂ, ತಡವಾಗಬಹುದೆಂದು ತೋಚಿ, ಎತ್ತ ತೋಚಿದತ್ತ ‘ದೇವರೇ ಗತಿ’ ಎಂದು ಅಂದಾಜಿನಲ್ಲಿ ನಡೆಯತೊಡಗಿದೆ.
ಸುಮಾರು ಏಳೂವರೆ ಇರಬಹುದು. ಬೆಳಗಿನ ಬಿಸಿಲು ತೀಕ್ಷ್ಣವಾಗಿ ರಾಚತೊಡಗಿತು. ಈಚಲಗರಿಗಳ ಮೇಲೆ ಪಸರಿಸಿದ ಮಂಜಿನ ಹನಿಗಳು ಬಿಸಿಲಿಗೆ ಆವಿಯಾಗತೊಡಗಿದವು. ಈಚಲಗರಿಗಳು ಬಿಸಿಲಿನ ಝಳಕ್ಕೆ ಚೂರಿಯಂತೆ ಜಳಜಳ ಸದ್ದು ಮಾಡತೊಡಗಿದವು.
ಹಲವೆಡೆ ಕಾಲ್ದಾರಿ ನಾಲ್ಕಾರು ಈಚಲಗುತ್ತಿಗಳ ನಡುವೆ ಇದ್ದಕ್ಕಿದ್ದಂತೆ ಕಾಣೆಯಾಗುತ್ತಿತ್ತು. ಕತ್ತನ್ನು ಅತ್ತಿತ್ತ ಆಡಿಸಿ ಹುಡುಕಿದರೆ ಮತ್ತೆಲ್ಲೋ ಕಾಲ್ದಾರಿಯೊಂದು ಪ್ರತ್ಯಕ್ಷವಾಗುತ್ತಿತ್ತು. ನಾನೆತ್ತ ಹೋಗಬೇಕಿತ್ತೋ? ಈ ಹಾದಿಗಳು ಎತ್ತ ಕರೆದೊಯ್ಯುತ್ತವೆಯೋ? ನೈಸರ್ಗಿಕ ಜಂತರ್ಮಂತರ್ ಒಂದನ್ನು ಹೊಕ್ಕು ಸುತ್ತಿದಲ್ಲೇ ಸುತ್ತುತ್ತಿದ್ದೇನೋ ಎಂಬ ಭ್ರಾಂತಿ ಶುರುವಾಯ್ತು.
ಅಷ್ಟರಲ್ಲಿ ಯಾರೋ ಕೆಮ್ಮಿದಂತಾಯ್ತು. ಅಷ್ಟೆತ್ತರ ಬೆಳೆದು ನಿಂತಿದ್ದ ಈಚಲಗಿಡಗಳಾಚೆ ಮನುಷ್ಯಾಕೃತಿಯೊಂದು ದೊಣ್ಣೆ ಹಾಗೂ ಗೋಣಿಚೀಲವನ್ನೆತ್ತಿಕೊಂಡು ಅದೆತ್ತಲೋ ಹೋಗುತ್ತಿದ್ದುದು ಗಮನಕ್ಕೆ ಬಂತು.
ಇದ್ಯಾವನಪ್ಪಾ ಈ ಸ್ಥಳದಲ್ಲಿ? ನೋಡಿದರೆ ಯಾರೋ ಶಿಕಾರಿಯವನಂತೆ ಕಾಣುತ್ತಾನೆ ಎಂದುಕೊಂಡು, “ಹೋಯ್!” ಎಂದು ಗಮನ ಸೆಳೆಯಲು ಕೂಗಿದೆ. ಅವನಿಗೂ ಗಾಬರಿಯಾಯಿತೆಂದು ಕಾಣುತ್ತೆ. ಗಲಿಬಿಲಿಯಿಂದ ತಿರುಗಿ ನೋಡಿದ. ಹೆಗಲ ಮೇಲಿದ್ದ ಗೋಣಿಚೀಲವನ್ನು ಕೆಳಗಿಳಿಸಿ, “ಒಹೋಯ್!” ಎಂದ.
‘ನಿಲ್ಲಿ, ನಿಲ್ಲಿ’ ಎಂದವನೇ ಅವನೆಡೆಗೆ ವೇಗವಾಗಿ ನಡೆಯತೊಡಗಿದೆ. ಗುತ್ತಿಗಳನ್ನು ಸುತ್ತಿ ಬಳಸಿ ಹಾವಿನಂತೆ ಅವನೆಡೆಗೆ ಹೋಗುತ್ತಿದ್ದವನು, ಕಾಲಿಗೇನೋ ತಾಗಿ ಹಾರಿ ನೆಗೆದು ಬಿದ್ದೆ.
ಎರಡು-ಮೂರು ಇಂಚು ಉದ್ದದ ಚೂರಿಯಂಥ ಈಚಲಮುಳ್ಳುಗಳ ಇರಿತದಿಂದ ನನ್ನ ಮುಖ ಪಾರಾದದ್ದೇ ಒಂದು ದೊಡ್ಡ ಪುಣ್ಯ. ಮಕಾಡೆ ಬಿದ್ದ ನನ್ನ ಮೇಲೆ ನನ್ನ ಬ್ಯಾಗು ಬಿದ್ದು, ಎಡಗೈ ಈಚಲಗುತ್ತಿಯ ಬುಡದ ಮುಳ್ಳಿನ ಮೇಲೆ ಬಿತ್ತು. ಒಂದು ಮುಳ್ಳು ಕಿರುಬೆರಳು ಮತ್ತದರ ಪಕ್ಕದ ಬೆರಳಿನ ಬುಡದ ನಡುವೆ ತೂರಿ ಮುರಿದುಹೋಯ್ತು.
ಅಸಾಧ್ಯ ನೋವಿನಿಂದ ಕಿರುಚುವಂತಾದ ನನ್ನ ಬಳಿಗೆ ಆ ವ್ಯಕ್ತಿ ಓಡಿ ಬಂದ.
“ಅಯ್ಯಯ್ಯೋ, ಎಂಥಾ ಕೆಲಸ ಆಯ್ತು! ತುಂಬಾ ಏಟಾಯ್ತಾ? ಏನ್ ಕಥೆ, ಮಾರಾಯ್ರೆ? ಇಲ್ಲಿಗ್ಯಾಕೆ ಬಂದ್ರಿ? ಈಗ ನಾನೇ ಬಲೆಯೊಡ್ಡಿ ಹೋಗಿದ್ದೆ. ತೆಳೂತಂತಿ ಬೇರೆ; ಕಾಣೋದಿಲ್ಲ. ಸರಿ, ಈಚೆ ಬನ್ನಿ. ಅರೇ! ಕೈಗೆ ತುಂಬಾ ಪೆಟ್ಟಾಗಿರೋ ಹಾಗಿದೆ. ರ್ರಿಯಾದ ಮುಳ್ಳೇ ಚುಚ್ಚಿದೆ. ಇದ್ರುಮನೆ ಕಾಯಾಗ. ಹಂಗೇ ಹಿಡ್ಕಳಿ, ನೋವಾಗುತ್ತೆ. ಹಾಗೆ ಇರಿ,” ಎಂದವನೇ ನನ್ನ ಎಡ ಅಂಗೈಯಲ್ಲಿ ತೂರಿಹೋಗಿ ಮುರಿದಿದ್ದ ಮುಳ್ಳನ್ನು ತನ್ನ ಹಲ್ಲಿನಲ್ಲಿ ಕಚ್ಚಿ ಬಲವಾಗಿ ಎಳೆದ.
ಮುಳ್ಳು ಹೊರಬಂದ ಕೂಡಲೇ ಆ ಜಾಗದಿಂದ ರಕ್ತ ಚಿಲ್ಲನೆ ಚಿಮ್ಮತೊಡಗಿತು.
“ಇಲ್ಲೇ ಇರಿ. ಒಂದು ಸೊಪ್ಪಿದೆ, ಔಷಧೀದು. ತರ್ತೀನಿ. ರಕ್ತ ಬರೋದು ಸ್ವಲ್ಪ ಹೊತ್ತಿನಲ್ಲೇ ನಿಲ್ಲುತ್ತೆ,” ಅಂದು ಎತ್ತಲೋ ಹೋಗಲುಪಕ್ರಮಿಸಿದ.
ನಾನು, “ಬೇಡ, ಬೇಡ. ನನ್ನ ಬ್ಯಾಗಿನಲ್ಲೇ ಫಸ್ಟ್ಏಡ್ ಬಾಕ್ಸ್ ಇದೆ. ಅದರಲ್ಲೇ ಟಿಂಚರ್, ಹತ್ತಿ, ಪ್ಲಾಸ್ಟರ್ ಇದೆ. ಸ್ವಲ್ಪ ತೆಗೆದು ಹಾಕಿ,” ಎಂದೆ.
ನನ್ನ ಬ್ಯಾಗನ್ನು ಬೆನ್ನಿನಿಂದ ಬಿಡಿಸಿ, ಜಿಪ್ ಎಳೆದು ಮೆಲ್ಲಗೆ ತೆಗೆದು, ಔಷಧಿ ಹಾಕಿ, ತನಗೆ ತಿಳಿದಂತೆ ಬ್ಯಾಂಡೇಜ್ ಹಾಕಿದ.

