ಬೆಂಗಳೂರು, ಆ. 6: ಭಾರತದಲ್ಲಿ ಯುಟಿಲಿಟಿ-ಮಟ್ಟದ (Utility-Scale) ಬ್ಯಾಟರಿ ಇಂಧನ ಸಂಗ್ರಹಣಾ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವ ಓಲಾ ಎಲೆಕ್ಟ್ರಿಕ್, ಆಕ್ಸಿಸ್ ಎನರ್ಜಿ ಸಂಸ್ಥೆಯೊಂದಿಗೆ ಮಹತ್ವದ ಒಪ್ಪಂದ (MoU) ಮಾಡಿಕೊಂಡಿದೆ. ಈ ಒಪ್ಪಂದದಡಿ 2032ರೊಳಗೆ 20 GWh ಬ್ಯಾಟರಿ ಇಂಧನ ಸಂಗ್ರಹಣಾ ವ್ಯವಸ್ಥೆ (Battery Energy Storage System – BESS) ನಿಯೋಜಿಸುವ ಗುರಿ ಹೊಂದಲಾಗಿದೆ.
ಈ ಒಪ್ಪಂದವು ಓಲಾ ಎಲೆಕ್ಟ್ರಿಕ್ನ ಹೊಸ ‘ಮಹಾಶಕ್ತಿ’ (Mahashakti) ಇಂಧನ ಸಂಗ್ರಹಣಾ ವೇದಿಕೆಯ ಮೊದಲ ಪ್ರಮುಖ ಪಾಲುದಾರಿಕೆಯಾಗಿದ್ದು, ಈ ವೇದಿಕೆಯನ್ನು ಆಗಸ್ಟ್ 15ರಂದು ಅಧಿಕೃತವಾಗಿ ಅನಾವರಣಗೊಳಿಸಲಾಗುತ್ತದೆ. ವಾಣಿಜ್ಯ, ಕೈಗಾರಿಕಾ ಹಾಗೂ ಯುಟಿಲಿಟಿ-ಮಟ್ಟದ ಬಳಕೆಗಾಗಿ ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯು ಭಾರತದ ಶುದ್ಧ ಇಂಧನ ಪರಿವರ್ತನೆಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ.
ಆಕ್ಸಿಸ್ ಎನರ್ಜಿ ಈಗಾಗಲೇ ಆಂಧ್ರಪ್ರದೇಶ ಹಾಗೂ ರಾಜಸ್ಥಾನದಲ್ಲಿ 3,750 ಮೆಗಾವಾಟ್ಗಿಂತ ಹೆಚ್ಚಿನ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಗ್ರಿಡ್ ಅನುಮೋದನೆ ಪಡೆದಿದ್ದು, ಹೆಚ್ಚುವರಿಯಾಗಿ 3,500 ಮೆಗಾವಾಟ್ ಸಾಮರ್ಥ್ಯದ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಿದೆ. ಈ ಯೋಜನೆಗಳಲ್ಲಿ ಬ್ಯಾಟರಿ ಇಂಧನ ಸಂಗ್ರಹಣಾ ವ್ಯವಸ್ಥೆಗಳು ಪ್ರಮುಖ ಪಾತ್ರ ವಹಿಸಲಿದ್ದು, ನವೀಕರಿಸಬಹುದಾದ ಇಂಧನದ ಸಮರ್ಪಕ ಬಳಕೆ, ವಿದ್ಯುತ್ ಜಾಲದ ಸ್ಥಿರತೆ ಮತ್ತು ನಿರಂತರ ಶುದ್ಧ ವಿದ್ಯುತ್ ಪೂರೈಕೆಗೆ ನೆರವಾಗಲಿವೆ.
ಕೇಂದ್ರ ವಿದ್ಯುತ್ ಪ್ರಾಧಿಕಾರದ (CEA) ಅಂದಾಜಿನ ಪ್ರಕಾರ, 2032ರ ವೇಳೆಗೆ ಭಾರತಕ್ಕೆ 400 GWhಕ್ಕೂ ಅಧಿಕ ಇಂಧನ ಸಂಗ್ರಹಣಾ ಸಾಮರ್ಥ್ಯ ಅಗತ್ಯವಾಗಲಿದೆ. ಈ ಅಗತ್ಯವನ್ನು ಮನಗಂಡು ಓಲಾ ಎಲೆಕ್ಟ್ರಿಕ್ ಭಾರತದಲ್ಲೇ ವಿನ್ಯಾಸಗೊಳಿಸಿ, ಭಾರತದಲ್ಲೇ ಉತ್ಪಾದಿಸಲಾದ ಸಂಪೂರ್ಣ ಏಕೀಕೃತ ಬ್ಯಾಟರಿ ಇಂಧನ ಸಂಗ್ರಹಣಾ ವೇದಿಕೆಯನ್ನು ಅಭಿವೃದ್ಧಿಪಡಿಸಿದೆ.
ಆಕ್ಸಿಸ್ ಎನರ್ಜಿ ವೆಂಚರ್ಸ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರವಿಕುಮಾರ್ ರೆಡ್ಡಿ ಕಟಾರು ಮಾತನಾಡಿ, “ನವೀಕರಿಸಬಹುದಾದ ಇಂಧನ ಯೋಜನೆಗಳ ವಿಸ್ತರಣೆಗೆ ವಿಶ್ವಾಸಾರ್ಹ ಬ್ಯಾಟರಿ ಸಂಗ್ರಹಣಾ ವ್ಯವಸ್ಥೆ ಅತ್ಯಗತ್ಯ. ಈ ಒಪ್ಪಂದವು ದೇಶೀಯ ತಂತ್ರಜ್ಞಾನ ಆಧಾರಿತ ಇಂಧನ ಸಂಗ್ರಹಣಾ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮಹತ್ವದ ಹೆಜ್ಜೆಯಾಗಿದೆ” ಎಂದು ಹೇಳಿದರು.
ಓಲಾ ಎಲೆಕ್ಟ್ರಿಕ್ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಭವೀಶ್ ಅಗರ್ವಾಲ್ ಮಾತನಾಡಿ, “ಭಾರತದ ಭವಿಷ್ಯದ ಇಂಧನ ಅಗತ್ಯಗಳಿಗೆ ದೊಡ್ಡ ಪ್ರಮಾಣದ ಸಂಗ್ರಹಣಾ ವ್ಯವಸ್ಥೆಗಳು ಅವಶ್ಯಕ. ನಮ್ಮ ಏಕೀಕೃತ ತಂತ್ರಜ್ಞಾನವು ಸುರಕ್ಷತೆ, ಹೆಚ್ಚಿನ ಕಾರ್ಯಕ್ಷಮತೆ ಹಾಗೂ ಕಡಿಮೆ ನಿರ್ವಹಣಾ ವೆಚ್ಚವನ್ನು ಒದಗಿಸುತ್ತದೆ. ಆಕ್ಸಿಸ್ ಎನರ್ಜಿ ಜೊತೆಗಿನ ಈ ಪಾಲುದಾರಿಕೆ ‘ಮಹಾಶಕ್ತಿ’ ವೇದಿಕೆಯ ಸಾಮರ್ಥ್ಯಕ್ಕೆ ದೊರೆತ ಮಹತ್ವದ ಮಾನ್ಯತೆಯಾಗಿದೆ” ಎಂದು ತಿಳಿಸಿದರು.
