ಕೆ.ಆರ್.ಪೇಟೆ: ಅಕ್ಕಿಹೆಬ್ಬಾಳು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ತಮ್ಮ ಧರ್ಮಪತ್ನಿ ರುಕ್ಮಿಣಿ ದಿನೇಶ್ ಅವರನ್ನು ಚುನಾವಣಾ ಕಣಕ್ಕಿಳಿಸಲು ನಿರ್ಧರಿಸಿದ್ದು, ಜನಸೇವೆ ಮಾಡಲು ಒಂದು ಅವಕಾಶ ನೀಡುವಂತೆ ಯುವ ಮುಖಂಡ ಬಸವನಹಳ್ಳಿ ದಿನೇಶ್ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿದರು.
ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಅಕ್ಕಿಹೆಬ್ಬಾಳು ಹೋಬಳಿಯ ಮುಖಂಡರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಸಮಾಜ ಸೇವಕ ಹಾಗೂ ಉದ್ಯಮಿಯಾಗಿ ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿರುವ ತಾವು, ಗ್ರಾಮೀಣ ಭಾಗದ ರೈತಾಪಿ ವರ್ಗದ ಜನರ ಸೇವೆ ಮಾಡುವ ಸಂಕಲ್ಪ ಹೊಂದಿದ್ದೇನೆ. ಈ ಹಿನ್ನೆಲೆಯಲ್ಲಿ ಅಕ್ಕಿಹೆಬ್ಬಾಳು ಪರಿಶಿಷ್ಟ ಪಂಗಡ ಮೀಸಲು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ತಮ್ಮ ಪತ್ನಿ ರುಕ್ಮಿಣಿ ಅವರನ್ನು ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದರು.
ಗ್ರಾಮೀಣ ಭಾಗದ ಬಡವರು, ನೊಂದವರು, ಶೋಷಿತರು ಹಾಗೂ ಅಸಹಾಯಕರಿಗೆ ನೆರವಾಗುವ ಮೂಲಕ ಸಾಮಾಜಿಕ ನ್ಯಾಯ ಕಾಪಾಡುವುದು ತಮ್ಮ ಉದ್ದೇಶವಾಗಿದೆ. ಕ್ಷೇತ್ರದ ಜನರ ಆಶೀರ್ವಾದ ದೊರೆತರೆ ಅಕ್ಕಿಹೆಬ್ಬಾಳು ಹೋಬಳಿಯನ್ನು ಮಂಡ್ಯ ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುವುದಾಗಿ ಭರವಸೆ ನೀಡಿದರು.
ಎಲ್ಲ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಈಗಾಗಲೇ ಹೋಬಳಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಹಣ ಮತ್ತು ಆಸ್ತಿ ಸಂಪಾದಿಸುವ ಉದ್ದೇಶದಿಂದ ರಾಜಕೀಯಕ್ಕೆ ಬರುತ್ತಿಲ್ಲ. ನ್ಯಾಯಯುತ ದುಡಿಮೆಯಿಂದ ಸಂಪಾದಿಸಿದ ಹಣದ ಒಂದು ಭಾಗವನ್ನು ಸಮಾಜ ಸೇವೆಗೆ ವಿನಿಯೋಗಿಸುತ್ತಿದ್ದು, ಬಡವರು ಹಾಗೂ ದೀನದಲಿತರ ಸೇವೆಯಲ್ಲಿ ಭಗವಂತನನ್ನು ಕಾಣುತ್ತಿದ್ದೇನೆ ಎಂದು ತಿಳಿಸಿದರು.
ಕ್ಷೇತ್ರದ ಮತದಾರರು ತಮ್ಮ ಪತ್ನಿಗೆ ಆಶೀರ್ವಾದ ನೀಡಿ ಗೆಲ್ಲಿಸಿದರೆ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಬಸವನಹಳ್ಳಿ ದಿನೇಶ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಕ್ಕಿಹೆಬ್ಬಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆರ್. ವಾಸು ರಾಜೇಗೌಡ, ಕೆ.ಆರ್.ಪೇಟೆ ತಾಲೂಕು ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಕುಮಾರ್, ನಾಯಕ ಸಮಾಜದ ಮುಖಂಡ ಶ್ರೀಧರ್, ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
