ಕೊರಟಗೆರೆ, ಆ. 6: ಕೊರಟಗೆರೆಯ ರಕ್ಷಾ ದೇವತೆ ಶ್ರೀ ಕೋಟೆ ಮಾರಮ್ಮ ಹಾಗೂ ಕೊಲ್ಲಾಪುರದಮ್ಮ ದೇವಿಯ ಜಾತ್ರಾ ಮಹೋತ್ಸವವು ಆಷಾಢ ಮಾಸದ ಮೂರನೇ ವಾರದಲ್ಲಿ ಸಂಪ್ರದಾಯಬದ್ಧವಾಗಿ ಹಾಗೂ ಅದ್ದೂರಿಯಾಗಿ ನಡೆಯಿತು. ಕರ್ನಾಟಕದ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕೊರಟಗೆರೆಯಲ್ಲಿ ನಡೆದ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ದೇವಿಯ ದರ್ಶನ ಪಡೆದರು.
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಕೋಟೆ ಮಾರಮ್ಮ ದೇವಿಯು ಕೊರಟಗೆರೆ ಹಾಗೂ ಸುತ್ತಮುತ್ತಲಿನ 16 ಗ್ರಾಮಗಳ ಗ್ರಾಮದೇವತೆಯಾಗಿ ಪೂಜಿಸಲ್ಪಡುತ್ತಿದ್ದು, ಸಾಂಕ್ರಾಮಿಕ ರೋಗಗಳು ಹಾಗೂ ಕೆಟ್ಟ ದೃಷ್ಟಿಯಿಂದ ಜನರನ್ನು ರಕ್ಷಿಸುವ ಶಕ್ತಿದೇವತೆಯೆಂಬ ನಂಬಿಕೆ ಭಕ್ತರಲ್ಲಿ ಇದೆ.
ಜಾತ್ರೆಯ ಅಂಗವಾಗಿ ಮೊದಲು ಗೌಡರ ಮನೆಯಿಂದ ವಾದ್ಯಗೋಷ್ಠಿ, ಕಳಸ ಹಾಗೂ ಬಾನದೊಂದಿಗೆ ಅರ್ಚಕರ ಮನೆಗೆ ಪೂಜಾ ಸಾಮಗ್ರಿಗಳನ್ನು ಕೊಂಡೊಯ್ಯಲಾಯಿತು. ಬಳಿಕ ಹೊಸ ಮಣ್ಣಿನ ದೇವರ ಮೂರ್ತಿಯನ್ನು ಜಲದಿ ಗದ್ದಿಗೆಗೆ ಕರೆತಂದು ಗ್ರಾಮಸ್ಥರು ಹಾಗೂ ವಿವಿಧ ಸಮುದಾಯದವರಿಗೆ ಆಹ್ವಾನ ನೀಡಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಗ್ರಾಮದೇವತೆಯ ಐತಿಹಾಸಿಕ ಮಹತ್ವ
ಸ್ಥಳೀಯರ ನಂಬಿಕೆಯಂತೆ, ಮೈಸೂರು ಒಡೆಯರ ಕಾಲದಲ್ಲಿ ಕೋಟೆ ಮಾರಮ್ಮ ದೇವಿಯ ಮಹತ್ವ ಅರಿತ ರಾಜರು ದೇವಿಯನ್ನು ಮೈಸೂರಿಗೆ ಕೊಂಡೊಯ್ದು ದೇವಾಲಯ ನಿರ್ಮಿಸುವ ಆಸೆ ವ್ಯಕ್ತಪಡಿಸಿದ್ದರು. ಆದರೆ, ಪೂರ್ವಿಕರು ದೇವಿಯು ಕೊರಟಗೆರೆಯ ಕೋಟೆಯ ರಕ್ಷಕ ದೇವತೆಯಾಗಿದ್ದು, ಈ ಪ್ರದೇಶದ ಜನರ ಆರಾಧ್ಯ ದೇವತೆಯಾಗಿರುವುದರಿಂದ ಒಪ್ಪಿಗೆ ನೀಡಲಿಲ್ಲ ಎನ್ನಲಾಗುತ್ತದೆ.
ದೇವಿಯು ಕಲ್ಲಿನ ರೂಪದಲ್ಲಿ ನೆಲೆಸಿದ್ದು, ಮಣ್ಣಿನ ಮೂರ್ತಿ ನಿರ್ಮಿಸಿ ಪ್ರತಿಷ್ಠಾಪಿಸಿ ಆರಾಧನೆ ಮಾಡುವ ಸಂಪ್ರದಾಯ ಇಂದಿಗೂ ಮುಂದುವರಿದಿದೆ. ಪ್ರತಿವರ್ಷವೂ ಊರಿನ ಹೆಣ್ಣುಮಕ್ಕಳು ತವರಿಗೆ ಆಗಮಿಸಿ ಜಾತ್ರೆಯಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದು ಬಾಗಿನ ಸಮರ್ಪಿಸಿ ಆಶೀರ್ವಾದ ಪಡೆಯುವುದು ವಿಶೇಷ ಸಂಪ್ರದಾಯವಾಗಿದೆ.
ಜಾತ್ರಾ ಮಹೋತ್ಸವದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್, ಸಂಘದ ಮಾಜಿ ಅಧ್ಯಕ್ಷ ಪುರುಷೋತ್ತಮ್, ಪರಮೇಶ್, ರಾಜಣ್ಣ, ರಂಗನಾಥ, ಕಾಂತಣ್ಣ ಸೇರಿದಂತೆ ಹಲವಾರು ಮುಖಂಡರು, ಸಾರ್ವಜನಿಕರು ಹಾಗೂ ಭಕ್ತರು ಭಾಗವಹಿಸಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
