ಕೊರಟಗೆರೆ:- ಜಾನುವಾರುಗಳನ್ನು ಮೇಯಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ನಿವೃತ್ತ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯೂಡಿ) ನೌಕರರೊಬ್ಬರು ಮೃತಪಟ್ಟ ಘಟನೆ ತಾಲ್ಲೂಕಿನ ಹುಲಿಕುಂಟೆ ಸಮೀಪದ ಗುಂಡನಪಾಳ್ಯ ಕ್ರಾಸ್ ಬಳಿ ಶುಕ್ರವಾರ ನಡೆದಿದೆ.
ಮೃತರನ್ನು ಹುಲಿಕುಂಟೆ ಗ್ರಾಮದ ವಿಜಯ್ ಕುಮಾರ್ (68) ಎಂದು ಗುರುತಿಸಲಾಗಿದೆ. ಅವರು ಪಿಡಬ್ಲ್ಯೂಡಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮಾಹಿತಿಯ ಪ್ರಕಾರ, ವಿಜಯ್ ಕುಮಾರ್ ಅವರು ತಮ್ಮ ಸೀಮೆ ಹಸುಗಳನ್ನು ಮೇಯಿಸಿಕೊಂಡು ಊರಿನತ್ತ ಹಿಂದಿರುಗುವ ವೇಳೆ ಗುಂಡನಪಾಳ್ಯ ಕ್ರಾಸ್ ಸಮೀಪದ ಸಿಮೆಂಟ್ ಇಟ್ಟಿಗೆ ಕಾರ್ಖಾನೆ ಬಳಿ ರಸ್ತೆ ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡರು.
ಅಪಘಾತದಲ್ಲಿ ತಲೆಗೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿ ಹೆಚ್ಚಿನ ರಕ್ತಸ್ರಾವ ಉಂಟಾಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕೊರಟಗೆರೆ ಸಿಪಿಐ ಪುರುಷೋತ್ತಮ್ ಹಾಗೂ ಪಿಎಸ್ಐ ತೀರ್ಥೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕುರಿತು ತನಿಖೆ ಮುಂದುವರಿದಿದೆ.
