ಕೆ.ಆರ್.ಪೇಟೆ,ಆ.07: ತಾಲ್ಲೂಕು ತಹಶೀಲ್ದಾರ್ ಶ್ರೇಯಸ್ ಹಾಗೂ ಆರ್.ಆರ್.ಟಿ ಶಿರಸ್ತೇದಾರ್ ಅಸ್ಲಾಂಬಾಷಾ ಅವರ ವಿರುದ್ಧ ಅಪಪ್ರಚಾರ ಮಾಡುತ್ತ ಸಾರ್ವಜನಿಕರಲ್ಲಿ ಕೆಟ್ಟ ಅಭಿಪ್ರಾಯ ಮೂಡುವಂತೆ ಮಾಡಿದ್ದ ಮಧ್ಯವರ್ತಿ ಮಲ್ಕೋನಹಳ್ಳಿ ಅಣ್ಣಯ್ಯ ಅವರಿಗೆ ಸಾರ್ವಜನಿಕರು ಹಾಗೂ ಅವರ ಮಲ್ಕೋನಹಳ್ಳಿ ಗ್ರಾಮಸ್ಥರೇ ಧರ್ಮದೇಟು ನೀಡಿ ತಾಲ್ಲೂಕು ಕಚೇರಿಯಿಂದ ಹೊರಗೆ ಕಳುಹಿಸಿದ ಘಟನೆ ಇಂದು ತಾಲೂಕು ಕಚೇರಿಯಲ್ಲಿ ನಡೆಯಿತು.
ಕೆ.ಆರ್.ಪೇಟೆ ತಹಸೀಲ್ದಾರ್ ಹಾಗೂ ದಂಡಾಧಿಕಾರಿಗಳಾಗಿ ಇತ್ತೀಚಿಗಷ್ಟೇ ವರ್ಗಾವಣೆಗೊಂಡು ಬಂದಿರುವ ಶ್ರೇಯಸ್ ಅವರ ವಿರುದ್ಧ ಅಪಪ್ರಚಾರ ನಡೆಸುತ್ತ ಹಿರಿಯ ನಾಗರಿಕನಾದ ನನ್ನ ಮೇಲೆ ಹಲ್ಲೆ ಮಾಡಿ ರೂಮಿನಲ್ಲಿ ಕೂಡಿ ಹಾಕಿಸಿದ್ದರು, ಆರ್ ಆರ್ ಟಿ ಶಾಖೆಯ ಶಿರಸ್ತೇದಾರ್ ಅಸ್ಲಾಂ ಬಾಷಾ ಅವರು ತಾನು ಖಾತೆ ಮಾಡಿಸಲು ತರುವ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡುತ್ತಿಲ್ಲ ಎಂದು ತಾಲೂಕು ಕಚೇರಿಯಲ್ಲಿ ಗದ್ದಲ ಮಾಡಿ ಕನ್ನಡ ಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೆ ತಾಲೂಕು ಕಚೇರಿ ಹಾಗೂ ತಹಶೀಲ್ದಾರ್ ವಿರುದ್ಧ ಅಪ ಪ್ರಚಾರ ನಡೆಸುತ್ತಿದ್ದನು ಎಂದು ತಾಲೂಕು ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಸೋಮಶೇಖರ್ ಹಾಗೂ ರೈತ ಮುಖಂಡ ಹೊನ್ನೇಗೌಡ ಗಂಭೀರ ಆರೋಪ ಮಾಡಿದರು.. ತಹಶೀಲ್ದಾರ್ ಶ್ರೇಯಸ್ ಅವರು ರೈತ ವಿರೋಧಿಯಲ್ಲಾ ಹಾಗೂ ಸರ್ವಾಧಿಕಾರಿಯೂ ಅಲ್ಲಾ, ಅವರು ಈ ಹಿಂದೆ ಕೆಲಸ ಮಾಡಿರುವ ತಾಲೂಕುಗಳಲ್ಲಿ ಒಳ್ಳೆಯ ಅಧಿಕಾರಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ತಹಸೀಲ್ದಾರ್ ಅವರಿಗೆ ಕೆಲಸ ಮಾಡಲು ಕಾಲಾವಕಾಶ ನೀಡದೇ ರೈತ ವಿರೋಧಿ ಎಂದು ಅಪಪ್ರಚಾರ ನಡೆಸಿ ಸೇವೆಯಿಂದ ಅಮಾನತ್ತು ಮಾಡಿ ಎನ್ನುವುದು ಸರ್ವತಾ ಸರಿಯಲ್ಲಾ, ನಾನು ರೈತ ಮುಖಂಡನಾಗಿದ್ದು ನ್ಯಾಯದ ಪರವಾಗಿ ಮಾತನಾಡುತ್ತಿದ್ದೇನೆ ಎಂದು ಪತ್ರಕರ್ತರಿಗೆ ತಿಳಿಸಿದರು.
ಮದ್ಯವರ್ತಿಗಳು ಹಾಗೂ ದಲ್ಲಾಳಿಗಳಿಗೆ ಅವಕಾಶವಿಲ್ಲ. ತಹಶೀಲ್ದಾರ್ ಶ್ರೇಯಸ್ ಪತ್ರಕರ್ತರೊಂದಿಗೆ ಮಾತನಾಡಿ ನಾನು ಒಬ್ಬ ರೈತನ ಮಗ, ಬಡತನದ ಬೇಗೆ ಹಾಗೂ ನೋವನ್ನು ಹತ್ತಿರದಿಂದ ಕಂಡಿರುವ ನಾನು ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಆಗಮಿಸುವ ಯಾವುದೇ ವ್ಯಕ್ತಿಯನ್ನು ನೋಯಿಸಿ ಅಪಮಾನಿಸಲು ಇಷ್ಟಪಡುವುದಿಲ್ಲ. ಅಣ್ಣಯ್ಯ ಒಬ್ಬ ಮದ್ಯವರ್ತಿಯಾಗಿದ್ದು ಅವರ ಊರಿನವರೇ ಬಂದು ಅಣ್ಣಯ್ಯ ವಿರುದ್ಧ ದೂರು ನೀಡಿದ್ದು, ಹಣ ಪಡೆದುಕೊಂಡು ನಮ್ಮ ಕೆಲಸವನ್ನು ಮಾಡಿಸಿಕೊಟ್ಟಿಲ್ಲ, ಗ್ರಾಮದಲ್ಲಿ ಅಶಾಂತಿ ಉಂಟು ಮಾಡುವ ಕೆಲಸ ಮಾಡುತ್ತಾ ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಇಂದು ತಾಲ್ಲೂಕು ಕಚೇರಿಯ ಆವರಣದಲ್ಲಿ ಅಣ್ಣಯ್ಯ ಮೇಲೆ ಹಲ್ಲೆ ನಡೆಸಿದವರು ಅವರ ಊರಿನವರೇ ಆಗಿದ್ದಾರೆ ಎಂದು ಸ್ಪಷ್ಟಪಡಿಸಿದರು. ನಾನು ಪಾರದರ್ಶಕ ಆಡಳಿತ ನಡೆಸಲು ಇಷ್ಟಪಡುವ ವ್ಯಕ್ತಿಯಾಗಿದ್ದು, ನನ್ನ ಆಡಳಿತದಲ್ಲಿ ದಲ್ಲಾಳಿಗಳು ಹಾಗೂ ಮಧ್ಯವರ್ತಿಗಳಿಗೆ ಅವಕಾಶವಿಲ್ಲ, ರೈತರು ತಮ್ಮ ಯಾವುದೇ ಕಾನೂನು ಬದ್ದವಾದ ಕೆಲಸ ಕಾರ್ಯಗಳಿಗೆ ನೇರವಾಗಿ ತಮ್ಮನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ರೈತರ ಸಮಸ್ಯೆಗಳನ್ನು ತನ್ನ ಗಮನಕ್ಕೆ ತಂದರೆ ಪ್ರಾಮಾಣಿಕವಾಗಿ ಸ್ಪಂದಿಸಿ ನಿಗದಿತ ಅವಧಿಯೊಳಗೆ ಕೆಲಸ ಮಾಡಿಕೊಡುವುದಾಗಿ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಕೊರಟಿಕೆರೆ ಮಂಜೇಗೌಡ, ಪಿ.ಬಿ ಮಂಚನಹಳ್ಳಿ ಚಂದ್ರಶೇಖರ್, ರೈತ ಮುಖಂಡರಾದ ಹೊನ್ನೇಗೌಡ, ನಾಟನಹಳ್ಳಿ ಮುರುಗೇಶ್, ಹೊಸಹೊಳಲು ಜಯಮ್ಮ, ಸಂತೇಬಾಚಹಳ್ಳಿ ರಘು, ಭಾರತಿಪುರ ಅನ್ಸರ್ಪಾಷಾ, ಅಕ್ಕಿಹೆಬ್ಬಾಳು ಮನುಕುಮಾರ್, ಜೈನಹಳ್ಳಿ ಗೌಡಪ್ಪ, ಹರೀಶ್, ಖಲಿಲ್ ಅಹಮದ್, ಹೊಸಹೊಳಲು ಗೋಪಾಲ್, ಮಹೇಶ್, ಬೂಕನಕೆರೆ ಮಂಜುನಾಥ್, ಕುಂದನಹಳ್ಳಿ ಶಿವಕುಮಾರ್ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
