ಕೆ.ಆರ್.ಪೇಟೆ, ಆ.8: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗೃಹಲಕ್ಷ್ಮಿ ಯೋಜನೆಯ 32ನೇ ಕಂತಿನ ₹2,443 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಮುಂದಿನ ಮೂರು-ನಾಲ್ಕು ದಿನಗಳಲ್ಲಿ ರಾಜ್ಯದ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಹಣ ಜಮೆಯಾಗಲಿದೆ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ ಪ್ರತಿ ಕುಟುಂಬದ ಯಜಮಾನಿಗೆ ಒಟ್ಟು ₹62 ಸಾವಿರ ಹಣವನ್ನು ಡಿಬಿಟಿ ಮೂಲಕ ತಲುಪಿಸಲಾಗಿದೆ. ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಕಳೆದ ಮೂರುವರೆ ವರ್ಷಗಳಲ್ಲಿ ರಾಜ್ಯ ಸರ್ಕಾರ ₹1,46,443 ಕೋಟಿ ಖರ್ಚು ಮಾಡಿದೆ ಎಂದು ಅವರು ಹೇಳಿದರು.

ಗ್ಯಾರಂಟಿ ಯೋಜನೆಗಳ ದುರುಪಯೋಗ ತಡೆಯುವ ಉದ್ದೇಶದಿಂದ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳನ್ನು ಪರಿಷ್ಕರಿಸಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದ 1,95,224 ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಖಾತೆಗಳಿಗೆ ಸುಮಾರು ₹115 ಕೋಟಿ ಹಣ ಪಾವತಿಯಾಗಿರುವುದು ಪತ್ತೆಯಾಗಿದೆ. ಮೃತ ಫಲಾನುಭವಿಗಳ ಹೆಸರುಗಳನ್ನು 15 ದಿನಗಳೊಳಗೆ ಪಟ್ಟಿಯಿಂದ ಕೈಬಿಡುವ ಸಂಬಂಧ ಸರ್ಕಾರ ಶೀಘ್ರದಲ್ಲೇ ಮಾರ್ಗಸೂಚಿ ರೂಪಿಸಲಿದೆ ಎಂದರು.
ಅನರ್ಹ ಫಲಾನುಭವಿಗಳನ್ನು ಮಾತ್ರ ಯೋಜನೆಯಿಂದ ಕೈಬಿಡಲಾಗುತ್ತದೆ. ಯಾವುದೇ ಅರ್ಹ ಫಲಾನುಭವಿಗಳನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ. ಅರ್ಹರು ಆತಂಕಪಡುವ ಅಗತ್ಯವಿಲ್ಲ ಎಂದು ಎ.ಬಿ.ಕುಮಾರ್ ಸ್ಪಷ್ಟಪಡಿಸಿದರು. ಗ್ಯಾರಂಟಿ ಯೋಜನೆಗಳ ಕುರಿತು ವಿಪಕ್ಷಗಳು ಫಲಾನುಭವಿಗಳಲ್ಲಿ ಗೊಂದಲ ಮೂಡಿಸುತ್ತಿದ್ದು, ಅರ್ಹ ಫಲಾನುಭವಿಗಳು ಇದಕ್ಕೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಕುರಿತು ಪ್ರತಿ ತಿಂಗಳು ಎರಡು ಬಾರಿ ನಡೆಯುವ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಅಧಿಕಾರಿಗಳು ತಮ್ಮ ಇಲಾಖೆಗಳ ಪ್ರಗತಿ ವರದಿ ಸಲ್ಲಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ಫಲಾನುಭವಿಗಳಿಗಾಗಿ ವಾಟ್ಸಾಪ್ ಗ್ರೂಪ್ಗಳನ್ನು ರಚಿಸಿ, ಅವರ ಕುಂದುಕೊರತೆಗಳನ್ನು ಆಲಿಸಿ ತ್ವರಿತವಾಗಿ ಪರಿಹರಿಸಬೇಕು ಎಂದು ಸೂಚಿಸಿದರು.
ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ನೀಡುವ ಮಹತ್ವದ ಯೋಜನೆ ಜಾರಿಗೊಳಿಸಿದ್ದು, ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅನುಕೂಲವಾಗಿದೆ. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ದಾಖಲಾದ ಕೂಡಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಉಚಿತ ಬಸ್ಪಾಸ್ ಪಡೆದುಕೊಳ್ಳಬೇಕು ಎಂದು ಎ.ಬಿ.ಕುಮಾರ್ ಸಲಹೆ ನೀಡಿದರು.

ಸಭೆಯಲ್ಲಿ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮೀಗೌಡ, ತಾಲ್ಲೂಕು ಆಹಾರ ಇಲಾಖೆಯ ಶಿರಸ್ತೇದಾರ್ ನಟರಾಜ್, ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಆರ್.ರೋಹಿತ್, ಜಿಲ್ಲಾ ಉದ್ಯೋಗಾಧಿಕಾರಿ ಹೇಮಲತಾ ಹಾಗೂ ಕೆಎಸ್ಆರ್ಟಿಸಿ ಬಸ್ ಡಿಪೋ ಸಹಾಯಕ ಟ್ರಾಫಿಕ್ ಇನ್ಸ್ಪೆಕ್ಟರ್ ನಾಗಸುಂದರ್ ಅವರು ತಮ್ಮ ಇಲಾಖೆಗಳ ಪ್ರಗತಿ ವರದಿಯನ್ನು ಮಂಡಿಸಿದರು.
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುಷ್ಮ, ಲೆಕ್ಕಾಧಿಕಾರಿ ಶಂಕರ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯರಾದ ಮೆಣಸ ಸಿ.ಆರ್.ಪಿ.ಕುಮಾರ್, ಕೆಎಸ್ಆರ್ಟಿಸಿ ಶಿವಣ್ಣ, ಸಿಂಗನಹಳ್ಳಿ ಗೋಪಾಲ್, ಬಂಡಿಹೊಳೆ ಯೋಗೇಶ್ (ಉಮೇಶ್), ಗೋವಿಂದನಹಳ್ಳಿ ಶ್ಯಾಮಣ್ಣ, ಯಗಚಗುಪ್ಪೆ ಶಿವಲಿಂಗಪ್ಪ, ಬೂಕನಕೆರೆ ಬಿ.ಸಿ.ಮಾಧು, ಹಾಫೀಜ್ಉಲ್ಲಾ, ದೊಡ್ಡತಾರಹಳ್ಳಿ ಸೋಮಶೇಖರ್, ಬೂಕನಕೆರೆ ರೂಪಾಚಂದ್ರಶೇಖರ್, ಕನಕದಾಸನಗರ ಶಿವಮ್ಮ, ಬೊಮ್ಮೇನಹಳ್ಳಿ ಲತಾ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ವಿಷಯ ನಿರ್ವಾಹಕಿ ನಂದಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್
