ರಾಮನಾಥಪುರ, ಆ.8: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಅರಕಲಗೂಡು ಘಟಕದ ವತಿಯಿಂದ ರಾಮನಾಥಪುರದ ಶ್ರೀ ವಿದ್ಯಾನಿಕೇತನ ವಿದ್ಯಾಸಂಸ್ಥೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಪದರಚನೆ, ಪಠ್ಯಾಧಾರಿತ ಪದ್ಯಗಾಯನ ಹಾಗೂ ಹತ್ತು ಸುತ್ತುಗಳ ವೈವಿಧ್ಯಮಯ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಶ್ರೀ ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಅಧ್ಯಕ್ಷ ವಿರೂಪಾಕ್ಷ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ರಾಜಣ್ಣ ಹಾಗೂ ಸಂಸ್ಥೆಯ ಸಿಬ್ಬಂದಿಯ ಸಹಕಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ರಸಪ್ರಶ್ನೆಗಳನ್ನು ವೇದಿಕೆಯ ಗೌರವಾಧ್ಯಕ್ಷ ಹಾಗೂ ಸಾಹಿತಿ ಹೊ.ರಾ. ಪರಮೇಶ್ ಹೊಡೇನೂರು ಮತ್ತು ಜಿಲ್ಲಾ ವೇದಿಕೆಯ ಉಪಾಧ್ಯಕ್ಷ ಆರ್.ಬಿ. ರಂಗನಾಥ್ ಸಂಯೋಜಿಸಿದ್ದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲ್ಲೂಕು ಅಧ್ಯಕ್ಷ ಗಂಗೇಶ್ ಬಸವನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, “ಕನ್ನಡ ನಾಡು-ನುಡಿಯ ಬಗ್ಗೆ ಬಾಲ್ಯದಿಂದಲೇ ಆಸಕ್ತಿ ಬೆಳೆಸಿಕೊಂಡು ಜ್ಞಾನ ಸಂಪನ್ನರಾಗಲು ಇಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಬಳಿಕ ನಡೆದ ಪದರಚನೆ ಸ್ಪರ್ಧೆಯಲ್ಲಿ ಸುಳಿವಿಗೆ ಅನುಗುಣವಾಗಿ ಸೂಕ್ತ ಕನ್ನಡ ಪದ ರಚಿಸುವ ಸ್ಪರ್ಧೆ ಹಾಗೂ ಪಠ್ಯದಲ್ಲಿರುವ ಪದ್ಯಗಳನ್ನು ಗಾಯನ ಮಾಡುವ ಸ್ಪರ್ಧೆ ನಡೆಯಿತು. ನಂತರ ಕನ್ನಡ, ವಿಜ್ಞಾನ, ಸಮಾಜ ವಿಜ್ಞಾನ, ಕ್ರೀಡೆ, ಸಾಹಿತ್ಯ, ಕವಿ-ಕವನಗಳು, ಒಗಟುಗಳು, ತರಕಾರಿಗಳ ತೇಲುವಿಕೆ-ಮುಳುಗುವಿಕೆ, ಸಾಧಕರ ಭಾವಚಿತ್ರ ಗುರುತಿಸುವಿಕೆ ಹಾಗೂ ಆಡಿಯೋ ಸುತ್ತಿನಲ್ಲಿ ಗೀತೆ ಮತ್ತು ಗಾಯಕರನ್ನು ಗುರುತಿಸುವುದು ಸೇರಿದಂತೆ ಹತ್ತು ಸುತ್ತುಗಳ ರಸಪ್ರಶ್ನೆ ಸ್ಪರ್ಧೆ ನಡೆಯಿತು.
ವೀಕ್ಷಕರಾಗಿದ್ದ ವಿದ್ಯಾರ್ಥಿಗಳಿಗೂ ರಸಪ್ರಶ್ನೆ ಕೇಳಿ ಬಹುಮಾನ ನೀಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ಪದ್ಯಗಾಯನ ಸ್ಪರ್ಧೆ:
ಕುವೆಂಪು ಶಾಲೆಯ ಸ್ಪರ್ಶ ಪ್ರಥಮ, ವಿದ್ಯಾನಿಕೇತನ ಶಾಲೆಯ ನೂರೇ ಹರ್ಮೈನ್ ದ್ವಿತೀಯ ಹಾಗೂ ಪಟ್ಟಾಭಿರಾಮ ಶಾಲೆಯ ಶ್ರೀನಿವಾಸ್ ತೃತೀಯ ಸ್ಥಾನ ಪಡೆದರು.
ಪದರಚನೆ ಸ್ಪರ್ಧೆ:
ಪಟ್ಟಾಭಿರಾಮ ಶಾಲೆಯ ದರ್ಶಿನಿ ಮತ್ತು ಲಕ್ಷ್ಮೀ ಪ್ರಥಮ, ಕುವೆಂಪು ಶಾಲೆಯ ಮಾನ್ಯ ಎಸ್., ಗಗನ್ ಹಾಗೂ ಜೆ. ರಾಮ್ ದ್ವಿತೀಯ ಹಾಗೂ ವಿದ್ಯಾನಿಕೇತನ ಶಾಲೆಯ ಸದ್ವಿತ್ ಮತ್ತು ಧನುಷ್ ತೃತೀಯ ಸ್ಥಾನ ಗಳಿಸಿದರು.
ರಸಪ್ರಶ್ನೆ ಸ್ಪರ್ಧೆ:
ಕುವೆಂಪು ಶಾಲೆಯ ತೇಜಸ್ ಮತ್ತು ಚೈತನ್ಯ ಪ್ರಥಮ, ವಿದ್ಯಾನಿಕೇತನ ಶಾಲೆಯ ಪುನೀತ್ ಮತ್ತು ಯಶ್ಮಿತ್ ಗೌಡ ದ್ವಿತೀಯ ಹಾಗೂ ವೆಂಕಟೇಶ್ವರ ಶಾಲೆಯ ಬಿಂದುಶ್ರೀ ಮತ್ತು ನಿತಿನ್ ತೃತೀಯ ಸ್ಥಾನ ಪಡೆದರು.
ವಿಜೇತರಿಗೆ ಆಕರ್ಷಕ ಸ್ಮರಣಿಕೆ, ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಲಾಯಿತು. ರಾಮನಾಥಪುರದ ಉದ್ಯಮಿ ದಂಪತಿ ಡಾ. ವಿನುತ ಮತ್ತು ವಿಜಯ್ ಕುಮಾರ್ ಅವರು ಬಹುಮಾನಗಳನ್ನು ಪ್ರಾಯೋಜಿಸಿದ್ದರು.
ಸ್ಪರ್ಧೆಯಲ್ಲಿ ಸ್ವಯಂ ಆಸಕ್ತಿಯಿಂದ ಹಾಸನದ ಸಿ.ಕೆ.ಎಸ್. ಶಾಲೆಯ ಶಿಕ್ಷಕಿ ಮಮತಾ ಹಾಗೂ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಶಿಕ್ಷಕ ದಯಾನಂದ್, ತಾಲ್ಲೂಕು ಕನ್ನಡ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಶಿವಣ್ಣ ಎಂ. ಕೆರೆಕೋಡಿ, ಸಂಚಾಲಕರಾದ ರಾಜೇಶ್ ಪಿ.ಸಿ., ಜೆ.ಎಸ್.ಪಿ. ರವಿ, ಕೆ.ಆರ್. ಗಿರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
