ಚನ್ನರಾಯಪಟ್ಟಣ: ಚಿಕ್ಕಬಳ್ಳಾಪುರದ ಕೆ.ವಿ. ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಚನ್ನರಾಯಪಟ್ಟಣದ ಶ್ರೀ ವಿವೇಕಾನಂದ ಅಂತರಾಷ್ಟ್ರೀಯ ಶಾಲೆಯ ತಂಡ ಮೂರನೇ ಸ್ಥಾನ ಪಡೆದುಕೊಂಡಿದೆ.
ತಂಡದ ಪ್ರಮುಖ ಆಟಗಾರರಾದ 8ನೇ ತರಗತಿಯ ವಿದ್ಯಾರ್ಥಿಗಳಾದ ಚಂದನ್ ಹಾಗೂ ಹರ್ಷಿತ್ ಅವರು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ರಾಷ್ಟ್ರಮಟ್ಟದ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಈ ಸಾಧನೆ ಕುರಿತು ಶಾಲೆಯ ಪ್ರಾಂಶುಪಾಲ ಇ. ಮಹಾದೇವ ಮಾತನಾಡಿ, ನಮ್ಮ ಶಾಲೆಯ ಇಬ್ಬರು ವಿದ್ಯಾರ್ಥಿಗಳು ವಾಲಿಬಾಲ್ನಲ್ಲಿ ರಾಷ್ಟ್ರಮಟ್ಟದ ತಂಡಕ್ಕೆ ಆಯ್ಕೆಯಾಗಿರುವುದು ಸಂಸ್ಥೆಯ ಎಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಯನ್ನು ಬೆಳೆಸಲು ಪೋಷಕರು, ಆಡಳಿತ ಮಂಡಳಿ ಹಾಗೂ ಶಿಕ್ಷಕರ ಸಂಪೂರ್ಣ ಸಹಕಾರ ಇರಲಿದೆ ಎಂದು ಹೇಳಿದರು.

ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಹಾಗೂ ಪ್ರೋತ್ಸಾಹಿಸುವ ಉದ್ದೇಶದಿಂದ ಶ್ರೀ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಹಾಗೂ ಎಸ್ವಿಐಎಸ್ ಶಾಲೆಯ ಪ್ರಾಂಶುಪಾಲ ಇ. ಮಹಾದೇವ, ದೈಹಿಕ ಶಿಕ್ಷಕರಾದ ಬಿ.ಕೆ. ರಾಘವೇಂದ್ರ, ಗಣೇಶ್ ಸಿದ್ದಣ್ಣನವರ್, ಪ್ರಮೀಳಾ ಸೇರಿದಂತೆ ಸಂಸ್ಥೆಯ ಶಿಕ್ಷಕರು ಚಂದನ್ ಹಾಗೂ ಹರ್ಷಿತ್ ಅವರನ್ನು ಸನ್ಮಾನಿಸಿ ಗೌರವಿಸಿದರು.
– ಮಂಜುನಾಥ್ ಐ.ಕೆ.
