ಬಾದಾಮಿ: ಬದುಕನ್ನು ಅರ್ಥಪೂರ್ಣವಾಗಿ ಬದುಕುವುದರ ಜೊತೆಗೆ ಬೇರೆಯವರಿಗೂ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಬೇಕು. ಸಮಾಜದಲ್ಲಿ ಸಹಕಾರ ತತ್ವದ ಮೂಲಕ ಬದುಕಿದಾಗ ಶಾಂತಿ ಮತ್ತು ಸಮಾಧಾನ ನೆಲೆಸಲು ಸಾಧ್ಯ ಎಂದು ಷ.ಬ್ರ. ಗುರುಮೂರ್ತಿ ಶಿವಾಚಾರ್ಯ ಹಾಲುಸ್ವಾಮೀಜಿ ಹೇಳಿದರು.
ಬಾದಾಮಿಯ ಬನಶಂಕರಿ ಶ್ರೀ ಗಾಯತ್ರಿ ಸಭಾಭವನದಲ್ಲಿ ಕದಂಬ ಸೈನ್ಯ ರಾಜ್ಯ ಕನ್ನಡ ಸಂಘಟನೆ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಚಾಲುಕ್ಯ ವರಸಿರಿ’ ಕೃತಿ ಲೋಕಾರ್ಪಣೆ ಹಾಗೂ ‘ಚಾಲುಕ್ಯ ಇಮ್ಮಡಿ ಪುಲಿಕೇಶಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಬಾದಾಮಿ ಕ್ಷೇತ್ರದ ಶಾಸಕ ಭೀಮಸೇನ ಬಿ. ಚಿಮ್ಮನಕಟ್ಟಿ ಮಾತನಾಡಿ, ಕದಂಬ ಸೈನ್ಯ ಕನ್ನಡ ಸಂಘಟನೆ ಕನ್ನಡ ನಾಡು-ನುಡಿಯ ಉಳಿವಿಗಾಗಿ ಉತ್ತಮ ಕಾರ್ಯ ಮಾಡುತ್ತಿದೆ. ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಸಾಹಿತಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕದಂಬ ಸೈನ್ಯ ಕನ್ನಡ ಸಂಘಟನೆಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಮಾತನಾಡಿ, ಕನ್ನಡಾಂಬೆಯ ಸೇವೆ ಸಲ್ಲಿಸುವ ಉದ್ದೇಶದಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಸಂಘಟನೆ ನಿರಂತರವಾಗಿ ಮಾಡುತ್ತಿದೆ. ಸಾಹಿತಿಗಳು, ಕಲಾವಿದರು, ಸಮಾಜ ಸೇವಕರು, ಪ್ರಗತಿಪರ ಕೃಷಿಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.
ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧುನಾಯ್ಕ ಲಂಬಾಣಿ, ಹಾಸನದ ಹಿರಿಯ ಸಾಹಿತಿ ಹಾಗೂ ನಿವೃತ್ತ ಎಂಜಿನಿಯರ್ ಟಿ. ಶಂಕರಪ್ಪ ಹುಲ್ಲಂಗಾಲ (ಕಾವ್ಯನಾಮ: ರಾಜಣ್ಣ ರಾಶಿ) ಹಾಗೂ ಯುವ ಸಾಹಿತಿ ಕೆ.ಎನ್. ಚಿದಾನಂದ ಅವರಿಗೆ ‘ಚಾಲುಕ್ಯ ಇಮ್ಮಡಿ ಪುಲಿಕೇಶಿ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಹಾಸನದ ಸಾಹಿತಿ ಗೊರೂರು ಅನಂತರಾಜು, ಬಾದಾಮಿಯ ನವಗ್ರಹ ಹಿರೇಮಠದ ಷ.ಬ್ರ. ಶಿವಪೂಜಾ ಶಿವಾಚಾರ್ಯ ಮಹಾಸ್ವಾಮೀಜಿ, ಚಿತ್ರ ನಿರ್ಮಾಪಕ ಡಾ. ಎನ್. ನರಸಿಂಹಮೂರ್ತಿ, ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಡಾ. ಸಿ. ರೇಣುಕಾಂಬ, ಚಲನಚಿತ್ರ ನಟಿ ಕು. ಸೋನಾ ಲದ್ವ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
