ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಬರಗೂರು ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಂಗವಾಗಿ ರೈತರಿಗೆ ಅಲ್ಪಾವಧಿ ಹಾಗೂ ಬರ ನಿರೋಧಕ ರಾಗಿ ತಳಿಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿದ್ಯಾರ್ಥಿಗಳು ಕೆಎಂಆರ್-316 ಹಾಗೂ ಕೆಎಂಆರ್-630 ಅಲ್ಪಾವಧಿ ರಾಗಿ ತಳಿಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಈ ತಳಿಗಳು ಸುಮಾರು 95ರಿಂದ 105 ದಿನಗಳಲ್ಲಿ ಫಸಲು ನೀಡಲಿದ್ದು, ಪ್ರತಿ ಎಕರೆಗೆ 14ರಿಂದ 20 ಕ್ವಿಂಟಲ್ವರೆಗೆ ಇಳುವರಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಇದೇ ವೇಳೆ ರಾಗಿ ಬೆಳೆಯಲ್ಲಿ ಅನುಸರಿಸಬೇಕಾದ ಸುಧಾರಿತ ಬೇಸಾಯ ಪದ್ಧತಿಗಳ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ರಾಗಿ ಬೆಳೆಗೆ ಪೊಟ್ಯಾಶ್ ಗೊಬ್ಬರದ ಮಹತ್ವ, ಬೆಳೆಯಲ್ಲಿ ಕಂಡುಬರುವ ವಿವಿಧ ರೋಗಗಳು ಹಾಗೂ ಕೀಟಗಳ ಕುರಿತು ವಿವರಿಸಲಾಯಿತು. ರೋಗ ಮತ್ತು ಕೀಟ ಬಾಧೆಯನ್ನು ನಿಯಂತ್ರಿಸಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಅರಿವು ಮೂಡಿಸಲಾಯಿತು.
ಅಲ್ಪಾವಧಿ ಹಾಗೂ ಬರ ನಿರೋಧಕ ರಾಗಿ ತಳಿಗಳ ಬಗ್ಗೆ ರೈತರು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ತಿಳಿಸಿದ ವಿದ್ಯಾರ್ಥಿಗಳು, ಕಾರ್ಯಕ್ರಮದಲ್ಲಿ ಭಾಗವಹಿಸಿದ ರೈತರಿಗೆ ಹೊಸ ತಳಿಗಳ ಬೀಜಗಳನ್ನು ಕೃಷಿ ಕಾಲೇಜು ಹಾಗೂ ರೈತ ಸಂಪರ್ಕ ಕೇಂದ್ರದಲ್ಲಿ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.
– ಮಂಜುನಾಥ್ ಐ.ಕೆ
