ಶ್ಲೋಕ – 07 & 08
ಮಮೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ ।
ಮನಃಷಷ್ಠಾನೀಂದ್ರಿಯಾಣಿ ಪ್ರಕೃತಿಸ್ಥಾನಿ ಕರ್ಷತಿ ॥೭॥
ಶರೀರಂ ಯದವಾಪ್ನೋತಿ ಯಚ್ಚಾಪ್ಯುತ್ ಕ್ರಾಮತೀಶ್ವರಃ ।
ಗೃಹೀತ್ವೈತಾನಿ ಸಂಯಾತಿ ವಾಯುರ್ಗಂಧಾನಿವಾSಶಯಾತ್ ॥೮॥
ಮಮ ಏವ ಅಂಶಃ ಜೀವಲೋಕೇ ಜೀವಭೂತಃ ಸನಾತನಃ ।
ಮನಃ ಷಷ್ಠಾನಿ ಇಂದ್ರಿಯಾಣಿ ಪ್ರಕೃತಿ ಸ್ಥಾನಿ ಕರ್ಷತಿ ||
ಶರೀರಮ್ ಯತ್ ಅವಾಪ್ನೋತಿ ಯತ್ ಚ ಅಪಿ ಉತ್ಕ್ರಾಮತಿ ಈಶ್ವರಃ ।
ಗೃಹೀತ್ವಾ ಏತಾನಿ ಸಂಯಾತಿ ವಾಯುಃ ಗಂಧಾನ್ ಇವ ಆಶಯಾತ್ –-ಈ ದೇಹದಲ್ಲಿರುವ ಅಳಿವಿರದ ಜೀವನು ನನ್ನದೇ ಒಂದು ತುಣುಕಿನಂತೆ; [ನನ್ನ ಭಿನ್ನಾಂಶ; ನನ್ನ ಪ್ರತಿಬಿಂಬ]. ಅವನು ಶರೀರದಲ್ಲಿರುವ ಐದು ಜ್ಞಾನೇಂದ್ರಿಯಗಳನ್ನು ಆರನೆಯ ಮನಸ್ಸಿನ ಜತೆಗೆ ವಿಷಯಗಳತ್ತ ಹರಿಯಗೊಡುತ್ತಾನೆ. ವಾಸ್ತವವಾಗಿ ಜೀವ ಈ ಶರೀರವನ್ನು ಹೊಕ್ಕಾಗ ಮತ್ತು ಬಿಟ್ಟು ಹೊರಟಾಗ ಸರ್ವಶಕ್ತನಾದ ಭಗವಂತನೆ ಈ ಇಂದ್ರಿಯಗಳನ್ನು ನಿಯಂತ್ರಿಸುತ್ತ ಜತೆಗೆ ಬರುತ್ತಾನೆ; ಗಾಳಿ ಹೂವಿನ ಕಂಪನ್ನು ಹೊತ್ತು ಬಂದಂತೆ. [ಭಗವಂತ ಈ ಜೀವದ ಶರೀರವನ್ನು ಹೊಕ್ಕಾಗ ಮತ್ತು ಹೊರಬಂದಾಗ ಐದು ಜ್ಞಾನೇಂದ್ರಿಯಗಳನ್ನು ಆರನೆಯ ಮನಸ್ಸಿನ ಜತೆಗೆ ತನ್ನಂಕೆಯಲ್ಲಿರಿಸಿಕೊಳ್ಳುತ್ತಾನೆ. ಜೀವನಿಗೆ ವಿಷಯಾನುಭವ ನೀಡುವಾಗ ಇವುಗಳನ್ನು ಜತೆಗೊಯ್ಯುತ್ತಾನೆ.-ಗಾಳಿ ಹೂವಿಂದ ಕಂಪನ್ನು ಜತೆಗೊಯ್ಯುವಂತೆ.]
ಈ ಶ್ಲೋಕ ಭಗವಂತ ಮತ್ತು ಜೀವ ಎರಡನ್ನೂ ವಿವರಿಸುವ ಶ್ಲೋಕ. ಇಲ್ಲಿ ನಮಗೆ ಸ್ವಲ್ಪ ಗೊಂದಲವೆನಿಸುವ ಮಾತನ್ನು ಕೃಷ್ಣ ಹೇಳುತ್ತಾನೆ. ಈ ಮಾತನ್ನು ಬೇರೆ ಬೇರೆ ಮುಖದಲ್ಲಿ ಸ್ಪಷ್ಟವಾಗಿ ತಿಳಿದುಕೊಳ್ಳದೇ ಇದ್ದರೆ ಎಲ್ಲವೂ ಅಸ್ಪಷ್ಟವೆನಿಸುತ್ತದೆ. ಮೇಲ್ನೋಟದಲ್ಲಿ ನೋಡಿದರೆ ಕೃಷ್ಣ ಹೇಳುತ್ತಾನೆ: “ಎಲ್ಲ ಜೀವರೂ ನನ್ನದೇ ಅಂಶ” ಎಂದು. ಇಲ್ಲಿ ಅಂಶ ಎನ್ನುವಲ್ಲಿ ಎರಡು ಮುಖವಿದೆ. ಒಂದು ಸ್ವರೂಪಭೂತ ಅಂಶ ಮತ್ತು ಇನ್ನೊಂದು ಭಿನ್ನಾಂಶ. ಭಗವಂತ ಜ್ಞಾನ ಸ್ವರೂಪ, ಈ ಜೀವನೂ ಕೂಡ ಜ್ಞಾನ ಸ್ವರೂಪ. ಭಗವಂತ ಮಹಾ ಬೆಳಕಾದರೆ ಜೀವ ಬೆಳಕಿನ ಕಿಡಿ. ಭಗವಂತ ಬಿಂಬವಾದರೆ ಜೀವ ಪ್ರತಿಬಿಂಬ. ಇದು ಸನಾತನ- ಅನಾದಿ ಅನಂತವಾಗಿರುವಂಥದ್ದು. ಜೀವ ಭಗವಂತನ ಪ್ರತಿಬಿಂಬ ಅಂದರೆ ಅದು ಭಗವಂತನ ಭಿನ್ನಾಂಶ. ಈ ಜೀವನೊಳಗೆ ‘ಜೀವನಾಗಿ’ ಧಾರಣೆ ಮಾಡಿಕೊಂಡು ಉಸಿರಾಡಿಸುವವ ಬಿಂಬರೂಪಿ ಭಗವಂತ. ಅದು ಭಗವಂತನ ಸ್ವರೂಪಾಂಶ. ಈ ರೀತಿ ಜೀವ ಹೊರಗಿನ ಪಂಚಭೂತವನ್ನು ಅನುಭವಿಸುವ ಐದು ಇಂದ್ರಿಯ, ಮತ್ತು ಈ ಅನುಭವವನ್ನು ಒಳಗಿನ ಜೀವಕ್ಕೆ ಮುಟ್ಟಿಸುವ ಆರನೇ ಮನಸ್ಸಿನೊಂದಿಗೆ, ಬಿಂಬರೂಪಿ ಭಗವಂತನ ಧಾರಣೆಯಲ್ಲಿ, ತಾಯಿಯ ಗರ್ಭದಲ್ಲಿ ರೂಪುಗೊಳ್ಳುತ್ತಿರುವ ಸ್ಥೂಲ ಶರೀರವನ್ನು ಪ್ರವೇಶ ಮಾಡುತ್ತಾನೆ(ಭಗವಂತ ಪ್ರವೇಶ ಮಾಡಿಸುತ್ತಾನೆ). ಹೀಗೆ ಪ್ರವೇಶ ಮಾಡಿದ ಜೀವಕ್ಕೆ ಬಿಂಬರೂಪಿ ಭಗವಂತ ಸರ್ವೆಂದ್ರಿಯದಲ್ಲಿದ್ದು, ಇಂದ್ರಿಯಾಭಿಮಾನಿ ದೇವತೆಗಳ ಮುಖೇನ ಅನುಭವ ಕೊಡುತ್ತಾನೆ. ಜೀವ ಭಗವಂತನ ಅನುಗ್ರಹದಿಂದ ವಿಷಯಗಳನ್ನು ಅನುಭವಿಸಲು ಆರಂಭಿಸುತ್ತಾನೆ.
ಒಬ್ಬ ಜೀವನಿಗೆ ಒಟ್ಟು ಮೂರು ಶರೀರಗಳಿರುತ್ತವೆ. ಒಂದು ಕಾಣುವ ಸ್ಥೂಲ ಶರೀರ, ಅದರೊಳಗೆ ಸೂಕ್ಷ್ಮ ಶರೀರ(ಅನಿರುದ್ಧ ಶರೀರ) ಮತ್ತು ಅದರೊಳಗೆ ಲಿಂಗ ಶರೀರ. ಈ ಸ್ಥೂಲ ಶರೀರವನ್ನು ಪ್ರವೇಶಿಸುವ ಸೂಕ್ಷ್ಮಶರೀರಿ ಜೀವಕ್ಕೆ ಎಲ್ಲ ಇಂದ್ರಿಯಗಳೂ ಇರುತ್ತವೆ. ಆದ್ದರಿಂದ ಈ ಜೀವ ತನ್ನ ಪೂರ್ವಜನ್ಮದ ನೆನಪನ್ನು ಅಂತರಂಗದಲ್ಲಿಟ್ಟುಕೊಂಡು ಗರ್ಭವನ್ನು ಪ್ರವೇಶಿಸುತ್ತಾನೆ. ಪೂರ್ವ ಜನ್ಮದ ಅಧ್ಯಾತ್ಮ ಸಾಧನೆ ಈ ಸೂಕ್ಷ್ಮ ಜೀವದ ಮನಸ್ಸಿನಲ್ಲಿ ಪೂರ್ಣವಾಗಿ ಉಳಿದಿರುತ್ತದೆ. ಇದಕ್ಕಾಗಿ ಅಧ್ಯಾತ್ಮ ಸಾಧನೆ ಎಂದೂ ವ್ಯರ್ಥವಾಗುವುದಿಲ್ಲ, ಅದು ಸದಾ ನಮ್ಮೊಂದಿಗೆ ಸಾವಿನಲ್ಲೂ ಜೊತೆಯಾಗಿ ಬರುತ್ತದೆ ಎಂದು ಹೇಳುವುದು. ಏಕೆಂದರೆ ಸಾವು ಕೇವಲ ಸ್ಥೂಲ ಶರೀರಕ್ಕೆ ಹೊರತು ಸೂಕ್ಷ್ಮಶರೀರಕ್ಕಲ್ಲ. ಸಂಮೋಹನ ನಿದ್ರೆಯಲ್ಲಿ(hypnotism) ಜೀವದ ಪೂರ್ವಜನ್ಮದ ವಿಷಯವನ್ನು ತಿಳಿಯಲು ಸಾಧ್ಯವಾಗುವುದು ಈ ಕಾರಣದಿಂದ. ನಮಗೆ ಕೆಲವೊಮ್ಮೆ ಒಬ್ಬರನ್ನು ನೋಡಿದಾಗ ಹಿಂದೆ ತುಂಬ ಪರಿಚಿತರಾಗಿ ನಮ್ಮೊಂದಿಗಿದ್ದವರಂತೆ ಕಂಡರೆ-ಅದಕ್ಕೆ ಪೂರ್ವ ಜನ್ಮದ ನೆನಪೂ ಒಂದು ಕಾರಣವಾಗಿರಬಹುದು. ಈ ನೆನಪು ಒಳಗಿರುವ ಸೂಕ್ಷ ಶರೀರದಲ್ಲಿ ಮಾತ್ರ ಜಾಗೃತವಾಗಿರುತ್ತದೆ-ಆದರೆ ಸ್ಥೂಲ ಇಂದ್ರಿಯದಲ್ಲಿ ಇದು ಜಾಗೃತವಾಗಿರುವುದಿಲ್ಲ. ಹೀಗೆ ಜೀವ ಸ್ಥೂಲ ಶರೀರವನ್ನು ಪ್ರವೇಶ ಮಾಡುವಾಗ ಇಂದ್ರಿಯಗಳನ್ನು ಕರ್ಷಣೆ ಮಾಡಿಕೊಂಡು ಬರುತ್ತಾನೆ ಮತ್ತು ಹೋಗುವಾಗ ಕರ್ಷಣೆ ಮಾಡಿಕೊಂಡು ಹೋಗುತ್ತಾನೆ. ಈ ಕ್ರಿಯೆಯಲ್ಲಿ ಜೀವ ಸ್ವತಂತ್ರನಲ್ಲ. ಇದನ್ನು ಮಾಡಿಸುವವ ‘ಈಶ್ವರ’. ಇಲ್ಲಿ ಈಶ್ವರ ಎಂದರೆ ಸರ್ವ ಸಮರ್ಥ ಭಗವಂತ ಎಂದರ್ಥ. ಶಂಕರಾಚಾರ್ಯರು ತಮ್ಮ ಭಾಷ್ಯದಲ್ಲಿ “ಈಶ್ವರಃ ಈಶನಶೀಲೋ ನಾರಾಯಣಃ” ಎಂದಿದ್ದಾರೆ. ಇಲ್ಲಿ ‘ಈಶನಶೀಲಃ’ ಎಂದರೆ ಸರ್ವಸಮರ್ಥ ಎಂದರ್ಥ.
ಈ ಶ್ಲೋಕದಲ್ಲಿ ಶಬ್ದಗಳ ಚಮತ್ಕಾರವಿದೆ. ‘ಅವಾಪ್ನೋತಿ’ ಎನ್ನುವಲ್ಲಿ ‘ಅವ’ ಅನ್ನುವುದು ಉಪಸರ್ಗ. ಹದಿನೈದು ಬೇಲಿಗಳೊಂದಿಗೆ ಜೀವ ದೇಹವನ್ನು ಪ್ರವೇಶಿಸುವುದು ಜೀವದ ಬಂಧನ. ಇದು ಒಂದು ರೀತಿಯ ‘ಅಧಃಪಾತ’. ಆದರೆ ಇದು ಊರ್ಧ್ವಗಮನಕ್ಕೆ ಪೂರ್ವ ಜೀವದ ಅಧಃಪಾತ. ಏಕೆಂದರೆ ಜೀವ ಮೋಕ್ಷ ಸೇರಲು ಈ ಸಾಧನಾ ಶರೀರ ಬೇಕೇಬೇಕು. ಇದೇ ರೀತಿ ಜೀವ ದೇಹವನ್ನು ಬಿಟ್ಟು ಹೊರ ಹೋಗುವುದನ್ನು ‘ಉತ್ಕ್ರಾಮತಿ’ ಎಂದಿದ್ದಾರೆ. ಸಾವು ಎಂದರೆ ಜೀವನನ್ನು ಭಗವಂತ ಸ್ಥೂಲ ಶರೀರದಿಂದ ಆಚೆ ಕರೆದುಕೊಂಡು ಹೋಗುವುದು. ಇದು ಅಮಂಗಳವಲ್ಲ. ಅದಕ್ಕಾಗಿ ಇಲ್ಲಿ ‘ಉತ್’ ಎನ್ನುವ ಉಪಸರ್ಗವನ್ನು ಬಳಸಲಾಗಿದೆ. ಇನ್ನು ಭಗವಂತ ಜೀವನನ್ನು ಕರೆತರುವುದನ್ನು ಇಲ್ಲಿ ‘ಸಂಯಾತಿ’ ಎಂದಿದ್ದಾರೆ. ಸಂ-ಎಂದರೆ ಸ್ವಯಂ, ಸ್ವೇಚ್ಛಾಯ, ಸ್ವಾತಂತ್ರೇಣ. ಎಲ್ಲವೂ ಭಗವಂತನ ಅಧೀನ, ಜೀವ ಸ್ವತಂತ್ರ ಅಲ್ಲ, ಕೇವಲ ಭಗವಂತ ಸ್ವತಂತ್ರ ಅನ್ನುವುದನ್ನು ಇದು ಸೂಚಿಸುತ್ತದೆ. ಜೀವನಿಗೆ ಹುಟ್ಟುವುದಕ್ಕಾಗಲಿ, ಸಾಯುವುದಕ್ಕಾಗಲಿ ಸ್ವಾತಂತ್ರ್ಯವಿಲ್ಲ. ಎಲ್ಲವೂ ಭಗವಂತನ ನಿಯಮನದಂತೇ ನಡೆಯುತ್ತದೆ.
ಹೇಗೆ ಜೀವ ತನ್ನ ಇಂದ್ರಿಯಗಳೊಂದಿಗೆ ಭಗವಂತನ ಜೊತೆಗೆ ಒಳ ಬರುತ್ತದೆ ಮತ್ತು ಹೊರ ಹೋಗುತ್ತದೆ ಎನ್ನುವುದನ್ನು ಹೂವಿನ ಸುಗಂಧದ ದೃಷ್ಟಾಂತದೊಂದಿಗೆ ಕೃಷ್ಣ ವಿವರಿಸಿದ್ದಾನೆ. ಅರಳಿ ನಿಂತಿರುವ ಹೂವಿನ ಸುಗಂಧ ಹೇಗೆ ನಮ್ಮ ಮೂಗನ್ನು ಬಂದು ಪ್ರವೇಶಿಸುತ್ತದೆಯೋ ಹಾಗೆ ಈ ಜೀವದ ಗತಿ. ಅದು ಕಾಣುವುದಿಲ್ಲ. ಹೂವಿನ ಸುಗಂಧದ ಸೂಕ್ಷ್ಮಾಣುಗಳು ನಮ್ಮ ಮೂಗನ್ನು ಪ್ರವೇಶಿಸುವುದು ನಮಗೆ ತಿಳಿಯುವುದು ಕೇವಲ ಸುವಾಸನೆಯಿಂದ, ಹೊರತು ಭೌತಿಕವಾಗಿ ಅಲ್ಲ. ಜೀವದ ಈ ಎಲ್ಲಾ ಗತಿ ಕೂಡ ಇದೇ ರೀತಿ. ಅದು ಕಾಣುವುದಿಲ್ಲ. ಇದನ್ನೇ ಇನ್ನೂ ಸ್ಪಷ್ಟವಾಗಿ ಕೃಷ್ಣ ಮುಂದಿನ ಮೂರು ಶ್ಲೋಕದಲ್ಲಿ ವಿವರಿಸುತ್ತಾನೆ.
