ರಾಮನಾಥಪುರ: ಪಟ್ಟಣದ ಶ್ರೀ ಬಸವೇಶ್ವರ ವೃತ್ತದಿಂದ ನಾಲ್ಕು ಕಡೆ ಸಾಗುವ ಪ್ರಮುಖ ರಸ್ತೆಗಳಲ್ಲಿ ಹಂಪ್ಸ್ ಅಳವಡಿಸಿ, ಅಪಘಾತಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಸ್. ಶಂಕರ್ ಒತ್ತಾಯಿಸಿದ್ದಾರೆ.
ಬಸವೇಶ್ವರ ವೃತ್ತದ ಸುತ್ತಮುತ್ತ ಈ ಹಿಂದೆ ಅಗತ್ಯವಿರುವ ಕಡೆ ರಸ್ತೆ ಉಬ್ಬುಗಳನ್ನು (ಹಂಪ್ಸ್) ನಿರ್ಮಿಸಲಾಗಿತ್ತು. ಆದರೆ ಇತ್ತೀಚೆಗೆ ರಸ್ತೆ ಅಗಲೀಕರಣ ಹಾಗೂ ಮರು ಡಾಂಬರೀಕರಣ ಕಾಮಗಾರಿ ನಡೆಸಿದ ಸಂದರ್ಭದಲ್ಲಿ ಹಂಪ್ಸ್ಗಳನ್ನು ಪುನರ್ನಿರ್ಮಿಸದ ಕಾರಣ ವಾಹನಗಳ ವೇಗ ಹೆಚ್ಚಾಗಿ, ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಅಪಘಾತಗಳು ಸಂಭವಿಸುತ್ತಿವೆ ಎಂದು ಅವರು ದೂರಿದರು.

ರಾಮನಾಥಪುರದ ಬಸವೇಶ್ವರ ವೃತ್ತದ ಪಕ್ಕದಲ್ಲೇ ಕರ್ನಾಟಕ ಸಾರಿಗೆ ಬಸ್ ನಿಲ್ದಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಇದೆ. ಹೀಗಾಗಿ ಈ ಪ್ರದೇಶದಲ್ಲಿ ಜನರು ಹಾಗೂ ವಿದ್ಯಾರ್ಥಿಗಳ ಸಂಚಾರವೂ ಹೆಚ್ಚಾಗಿದೆ.
ಬಸವೇಶ್ವರ ವೃತ್ತದಿಂದ ಬಿಳಗೂಲಿ, ಮಡಿಕೇರಿ, ಹಾಸನ ಹಾಗೂ ಪಿರಿಯಾಪಟ್ಟಣದ ಕಡೆಗೆ ನಾಲ್ಕು ಪ್ರಮುಖ ರಸ್ತೆಗಳು ಸಂಪರ್ಕ ಕಲ್ಪಿಸುತ್ತವೆ. ಆದರೆ ನಾಲ್ಕೂ ರಸ್ತೆಗಳಲ್ಲಿ ಹಂಪ್ಸ್ ಇಲ್ಲದಿರುವುದರಿಂದ ವಾಹನಗಳು ವೇಗವಾಗಿ ಸಂಚರಿಸುತ್ತಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಸಂಭವಿಸಿದ ಅಪಘಾತಗಳಲ್ಲಿ ಹಲವರು ಗಾಯಗೊಂಡಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳು ಈ ಮಾರ್ಗದಲ್ಲಿ ಸಂಚರಿಸಲು ಆತಂಕಪಡುವಂತಾಗಿದೆ ಎಂದು ಶಂಕರ್ ಹೇಳಿದರು.

ಆದ್ದರಿಂದ ಬಸವೇಶ್ವರ ವೃತ್ತದಿಂದ ಹಾಸನ, ಮಡಿಕೇರಿ, ಬಿಳಗೂಲಿ ಹಾಗೂ ಪಿರಿಯಾಪಟ್ಟಣದ ಕಡೆಗೆ ತೆರಳುವ ನಾಲ್ಕೂ ರಸ್ತೆಗಳಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಮತ್ತೆ ಹಂಪ್ಸ್ ಅಳವಡಿಸಿ, ಅಪಘಾತಗಳನ್ನು ತಡೆಯಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸಮಸ್ಯೆ ಪರಿಹರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್.ಎಸ್. ಶಂಕರ್ ಎಚ್ಚರಿಸಿದರು.
– ಕುಮಾರಸ್ವಾಮಿ ಎಂ.ಎನ್.
