ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಬೆಂಡೋಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಐದು ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಸೆ.27ರಂದು ಶಾಂತಿಯುತವಾಗಿ ಹಾಗೂ ಪ್ರಜಾಸತ್ತಾತ್ಮಕವಾಗಿ ನಡೆಯಿತು.
ಚುನಾವಣೆಯಲ್ಲಿ ಸಂಘದ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ವಿವಿಧ ಕ್ಷೇತ್ರಗಳಿಂದ ನೂತನ ನಿರ್ದೇಶಕರ ಆಯ್ಕೆ ನಡೆದಿದೆ. ಸಾಮಾನ್ಯ ಕ್ಷೇತ್ರದಿಂದ 6, ಮಹಿಳಾ ಮೀಸಲು ಕ್ಷೇತ್ರದಿಂದ 2, ಪರಿಶಿಷ್ಟ ಜಾತಿ ಕ್ಷೇತ್ರದಿಂದ 1, ಪರಿಶಿಷ್ಟ ಪಂಗಡ ಕ್ಷೇತ್ರದಿಂದ 1 ಹಾಗೂ ಹಿಂದುಳಿದ ವರ್ಗದ ಕ್ಷೇತ್ರದಿಂದ 2 ನಿರ್ದೇಶಕರು ಆಯ್ಕೆಯಾಗಿದ್ದಾರೆ.
ನೂತನ ನಿರ್ದೇಶಕರಾಗಿ ವಿಜಯ್ ಶಂಕರ್ ಎಂ.ಪಿ., ಹನುಮಂತರಾಯಪ್ಪ, ಅಶ್ವತಯ್ಯ, ಅಖಂಡ ಆರಾಧ್ಯ, ಮಂಜುನಾಥ್, ರಮ್ಯಾ, ಮಮತ, ರೇವಣ್ಣ ಸಿದ್ದಯ್ಯ ಹಾಗೂ ರಮೇಶ್ ಸೇರಿದಂತೆ ಇತರರು ಆಯ್ಕೆಯಾಗಿದ್ದಾರೆ.
ರೈತರ ಏಳಿಗೆಯೇ ಮೂಲ ಮಂತ್ರ
ಚುನಾವಣೆಯ ಬಳಿಕ ಮಾತನಾಡಿದ ನೂತನ ಆಡಳಿತ ಮಂಡಳಿ ಸದಸ್ಯರು, ರೈತರ ಏಳಿಗೆಯೇ ತಮ್ಮ ಮೂಲ ಮಂತ್ರವಾಗಿದ್ದು, ಸಹಕಾರ ಕ್ಷೇತ್ರವು ಕೃಷಿಕರ ಹಾಗೂ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದೆ ಎಂದು ಹೇಳಿದರು.
ಸಂಘದ ಮೂಲಕ ದೊರೆಯುವ ಸಾಲ ಸೌಲಭ್ಯಗಳು, ಸರ್ಕಾರದ ಯೋಜನೆಗಳು ಹಾಗೂ ಕೃಷಿ ಉತ್ತೇಜನ ಕಾರ್ಯಕ್ರಮಗಳನ್ನು ಅರ್ಹ ಪ್ರತಿಯೊಬ್ಬ ರೈತರಿಗೂ ತಲುಪಿಸುವುದು ನೂತನ ಮಂಡಳಿಯ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದರು.
ಮುಂದಿನ ಐದು ವರ್ಷಗಳಲ್ಲಿ ಸಂಘದಲ್ಲಿ ಪಾರದರ್ಶಕ ಹಾಗೂ ರೈತ ಸ್ನೇಹಿ ಆಡಳಿತಕ್ಕೆ ಒತ್ತು ನೀಡುವುದು, ಶೂನ್ಯ ಬಡ್ಡಿ ದರದ ಕೃಷಿ ಸಾಲ ಹಾಗೂ ಮಧ್ಯಮಾವಧಿ ಸಾಲಗಳನ್ನು ಅರ್ಹರಿಗೆ ಸಮಯಕ್ಕೆ ಸರಿಯಾಗಿ ಒದಗಿಸುವುದು, ಸಂಘದ ವಹಿವಾಟಿನಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲೀಕರಣ ಅಳವಡಿಸುವುದು ಹಾಗೂ ಎಲ್ಲಾ ರೈತ ಸದಸ್ಯರನ್ನು ಒಗ್ಗೂಡಿಸಿಕೊಂಡು ಬೆಂಡೋಣೆ ಸಹಕಾರ ಸಂಘವನ್ನು ತಾಲ್ಲೂಕಿನ ಮಾದರಿ ಸಂಘವನ್ನಾಗಿ ರೂಪಿಸುವ ಗುರಿ ಹೊಂದಿರುವುದಾಗಿ ಹೇಳಿದರು.
“ಗೆಲುವು ಅಧಿಕಾರವಲ್ಲ, ದೊಡ್ಡ ಜವಾಬ್ದಾರಿ. ನಮಗೆ ನೀಡಿರುವ ನಂಬಿಕೆಗೆ ಯಾವುದೇ ಕುಂದು ಬಾರದಂತೆ ಮುಂದಿನ ಐದು ವರ್ಷಗಳ ಕಾಲ ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತೇವೆ” ಎಂದು ನೂತನ ಆಡಳಿತ ಮಂಡಳಿ ಸದಸ್ಯರು ಭರವಸೆ ನೀಡಿದರು.
ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಚುನಾವಣಾಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಸಂಘದ ಸಿಬ್ಬಂದಿ ವರ್ಗ ಹಾಗೂ ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ ನೂತನ ಆಡಳಿತ ಮಂಡಳಿ ಕೃತಜ್ಞತೆ ಸಲ್ಲಿಸಿತು.
ವರದಿ: ನರಸಿಂಹಯ್ಯ ಹೊಸಕೋಟೆ
