ಚನ್ನರಾಯಪಟ್ಟಣ: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಶ್ರವಣಬೆಳಗೊಳ ಮಂಡಲದ ವತಿಯಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶುಕ್ರವಾರ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ತ್ರಿವರ್ಣ ಯಾತ್ರೆ ನಡೆಯಿತು. ರಾಷ್ಟ್ರಭಕ್ತರು ಹಾಗೂ ವಿದ್ಯಾರ್ಥಿಗಳು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಯಾತ್ರೆಯಲ್ಲಿ ಪಾಲ್ಗೊಂಡರು.
ಬಿಜೆಪಿ ಹಾಸನ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಹಾಗೂ ಶ್ರವಣಬೆಳಗೊಳ ಮಂಡಲ ಅಧ್ಯಕ್ಷ ಪರಮ ಗಂಗಾಧರ್ ಅವರು ದೀಪ ಬೆಳಗಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಸ್ವಾತಂತ್ರ್ಯ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿದಿನವೂ ದೇಶಭಕ್ತಿಯ ಭಾವನೆಯೊಂದಿಗೆ ದೇಶದ ಹಿರಿಮೆಯನ್ನು ಎತ್ತಿಹಿಡಿಯಲು ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಶ್ರೀಹರಿ ಜೆ. ಗೌಡ ಮಾತನಾಡಿ, ಹಲವಾರು ಮಹನೀಯರ ರಕ್ತ ಬಲಿದಾನದ ಫಲವಾಗಿ ದೊರೆತ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು, ಮುಂದಿನ ಪೀಳಿಗೆಗೂ ಉಳಿಸಿ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಪಟ್ಟಣದ 40 ಅಡಿ ಆಂಜನೇಯ ಸ್ವಾಮಿ ಸನ್ನಿಧಿಯಿಂದ ಆರಂಭಗೊಂಡ ತ್ರಿವರ್ಣ ಯಾತ್ರೆ ಕೆ.ಆರ್. ವೃತ್ತ, ನವೋದಯ ವೃತ್ತ, ಹೊಸ ಬಸ್ ನಿಲ್ದಾಣ ಮಾರ್ಗವಾಗಿ ಮೈಸೂರು ರಸ್ತೆ ಹಾಗೂ ಆಸ್ಪತ್ರೆ ರಸ್ತೆಯ ಮೂಲಕ ಸಾಗಿ ಮತ್ತೆ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಮುಕ್ತಾಯಗೊಂಡಿತು.
ಸಾವಿರಾರು ದೇಶಭಕ್ತರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು “ಭಾರತ್ ಮಾತಾ ಕೀ ಜೈ” ಘೋಷಣೆಗಳೊಂದಿಗೆ ಯಾತ್ರೆಯಲ್ಲಿ ಭಾಗವಹಿಸಿದರು. ಸುಮಾರು 1,000 ಮೀಟರ್ ಉದ್ದದ ತಿರಂಗ ಧ್ವಜ ಯಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, ಸಾರ್ವಜನಿಕರ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ಗನ್ನಿ ವಿಶ್ವನಾಥ್ ಸಿ.ಕೆ., ಪ್ರಶಾಂತ್ ಮುಳ್ಳುಕೆರೆ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ್, ಮಹಿಳಾ ಮೋರ್ಚಾ ಅಧ್ಯಕ್ಷೆ ಅರ್ಪಿತಾ ಪಟೇಲ್, ಪ್ರಧಾನ ಕಾರ್ಯದರ್ಶಿ ಕಲಾವತಿ, ಬಿಜೆಪಿ ಮುಖಂಡರಾದ ಅಶೋಕ್, ಸತೀಶ್ ಗೌಡಗೆರೆ, ಗುರುರಾಜ್, ವಿಶ್ವನಾಥ್ ಸಾತೇನಹಳ್ಳಿ, ಸತೀಶ್ ಕಂಠಿ, ಪ್ರಸನ್ನ ವಡ್ಡರಹಳ್ಳಿ, ರಾಜಕುಮಾರ್, ಚಂದ್ರಶೇಖರ್, ದೇವರಾಜ್ ದಡಿಘಟ್ಟ, ಬಸವರಾಜ್, ಶ್ರುತಿ, ಶೋಭಾ, ನಾಗರತ್ನಮ್ಮ ಸೇರಿದಂತೆ ಹಲವು ಮುಖಂಡರು ಹಾಗೂ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಿಂಬೆಹಳ್ಳಿ ಗಿರೀಶ್, ನಂಜುಂಡಮೈಮ್, ನಟರಾಜ್, ಯುವ ಮುಖಂಡರಾದ ಹಿರಿಬೀಳ್ತಿ ನಾಗೇಶ್, ರಘು, ಪ್ರಸನ್ನ, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಶಕ್ತಿ ಕೇಂದ್ರಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮಾಜಿ ಅಧ್ಯಕ್ಷರು, ಹಿರಿಯ ಮುಖಂಡರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
– ಮಂಜುನಾಥ್ ಐ.ಕೆ.
