ನವದೆಹಲಿ: ಭಾರತ ಸರ್ಕಾರವು ತನ್ನ ಪರಮಾಣು ಇಂಧನ ವಲಯದಲ್ಲಿ ಐತಿಹಾಸಿಕ ಸುಧಾರಣೆಯನ್ನು ಜಾರಿಗೆ ತಂದಿದ್ದು, ‘ಶಾಂತಿ’ ಕಾಯ್ದೆ, ೨೦೨೫ ರ (SHANTI Act, 2025 – Sustainable Harnessing and Advancement of Nuclear Energy for Transforming India) ಮೂಲಕ ದೇಶೀಯ ಖಾಸಗಿ ಸಂಸ್ಥೆಗಳು ಮತ್ತು ವಿದೇಶಿ ಪಾಲುದಾರರಿಗೆ ಪರಮಾಣು ವಿದ್ಯುತ್ ಸ್ಥಾವರಗಳನ್ನು ನಿರ್ಮಿಸಲು, ನಿರ್ವಹಿಸಲು ಹಾಗೂ ಮಾಲೀಕತ್ವ ಹೊಂದಲು ಮುಕ್ತ ಅವಕಾಶ ಕಲ್ಪಿಸಿದೆ.
ಈ ನೂತನ ಕಾಯ್ದೆಯು ಸುಮಾರು ಆರು ದಶಕಗಳ ಕಾಲ ಜಾರಿಯಲ್ಲಿದ್ದ ‘ಪರಮಾಣು ಶಕ್ತಿ ಕಾಯ್ದೆ, ೧೯೬೨’ (Atomic Energy Act, 1962) ಮತ್ತು ‘ಪರಮಾಣು ಹಾನಿಗಾಗಿ ನಾಗರಿಕ ಹೊಣೆಗಾರಿಕೆ ಕಾಯ್ದೆ, ೨೦೧೦’ (CLND Act, 2010) ಅನ್ನು ರದ್ದುಗೊಳಿಸಿದೆ.
೧. ಕರಡು ನಿಯಮಾವಳಿಗಳು ಮತ್ತು ಹೂಡಿಕೆ ಅವಕಾಶಗಳು:
ಕೇಂದ್ರ ಪರಮಾಣು ಶಕ್ತಿ ಇಲಾಖೆಯು (DAE) ಆಗಸ್ಟ್ 14, 2026 ರಂದು ‘ಶಾಂತಿ’ ಕಾಯ್ದೆಯಡಿ ಕರಡು ನಿಯಮಾವಳಿಗಳನ್ನು ಪ್ರಕಟಿಸಿದೆ:
-
ಖಾಸಗಿ ವಲಯದ ಪ್ರವೇಶ: ನಿಯಂತ್ರಿತ ಅನುಮೋದನಾ ವ್ಯವಸ್ಥೆಯಡಿ ಖಾಸಗಿ ಕಂಪನಿಗಳು ಪರಮಾಣು ಸ್ಥಾವರಗಳಿಗಾಗಿ ಭೂಸ್ವಾಧೀನ, ಸ್ಥಳ ಸಿದ್ಧತೆ ಮತ್ತು ತಂತ್ರಜ್ಞಾನ ಮಾರಾಟಗಾರರನ್ನು (Vendors) ಮುಂಚಿತವಾಗಿಯೇ ಆಯ್ಕೆ ಮಾಡಿಕೊಳ್ಳಲು ಅನುಮತಿಸಲಾಗಿದೆ.
-
೪೯% ವರೆಗೆ ವಿದೇಶಿ ನೇರ ಹೂಡಿಕೆ (FDI): ಜಂಟಿ ಸಹಭಾಗಿತ್ವದ (Joint Ventures) ಮೂಲಕ ಪರಮಾಣು ವಲಯದಲ್ಲಿ ಗರಿಷ್ಠ ಶೇಕಡಾ 49% ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಲಾಗಿದೆ.
-
ವಿದೇಶಿ ತಂತ್ರಜ್ಞಾನ ಆಮದು: ವಿದೇಶಗಳಲ್ಲಿ ಯಶಸ್ವಿ ಕಾರ್ಯಾಚರಣೆಯ ದಾಖಲೆ ಹೊಂದಿರುವ ರಿಯಾಕ್ಟರ್ ತಂತ್ರಜ್ಞಾನಗಳನ್ನು ಆಮದು ಮಾಡಿಕೊಳ್ಳಲು ಅನುಮೋದನೆ ನೀಡಲಾಗಿದ್ದು, ಸುರಕ್ಷತಾ ನಿಯಮ ಉಲ್ಲಂಘನೆಯಾದರೆ ಯಾವುದೇ ಹಂತದಲ್ಲಿ ಯೋಜನೆಯನ್ನು ಸ್ಥಗಿತಗೊಳಿಸುವ ಅಧಿಕಾರವನ್ನು ನಿಯಂತ್ರಕ ಪ್ರಾಧಿಕಾರ ಹೊಂದಿರುತ್ತದೆ.
೨. ‘ನ್ಯೂಕ್ಲಿಯರ್ ಎನರ್ಜಿ ಮಿಷನ್’ ಮತ್ತು ೨೦೪೭ ರ ಮಹತ್ವಾಕಾಂಕ್ಷೆಯ ಗುರಿ:
ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ, ದೇಶದಲ್ಲಿ ಸ್ವಚ್ಛ ಇಂಧನ ಉತ್ಪಾದನೆಯನ್ನು ಹೆಚ್ಚಿಸಲು ದ್ವಿಮುಖ ಕಾರ್ಯತಂತ್ರವನ್ನು ರೂಪಿಸಲಾಗಿದೆ:
-
೨೦೪೭ ರ ವೇಳೆಗೆ ೧೦೦ GWe ಗುರಿ: ಭಾರತದ ಸ್ವಾತಂತ್ರ್ಯದ ಶತಮಾನೋತ್ಸವದ (2047) ವೇಳೆಗೆ ದೇಶದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 100 ಗಿಗಾವ್ಯಾಟ್ಗೆ (GWe) ಹೆಚ್ಚಿಸುವ ಗುರಿ ಹೊಂದಲಾಗಿದೆ.
-
೨೦೩೩ ರ ಮಧ್ಯಂತರ ಗುರಿ: 2033 ರ ವೇಳೆಗೆ ಸ್ವದೇಶಿ 700 MWe ರಿಯಾಕ್ಟರ್ಗಳು ಹಾಗೂ ೫ ಸಣ್ಣ ಮಾಡ್ಯುಲರ್ ರಿಯಾಕ್ಟರ್ಗಳನ್ನು (SMRs – Small Modular Reactors) ನಿರ್ಮಿಸಲು ಯೋಜಿಸಲಾಗಿದೆ.
-
SMR ತಂತ್ರಜ್ಞಾನ: ಸಣ್ಣ ಗಾತ್ರದ, ಕಡಿಮೆ ಸಾಮರ್ಥ್ಯದ ಹಾಗೂ ತ್ವರಿತವಾಗಿ ಸ್ಥಾಪಿಸಬಹುದಾದ ಕಾಂಪ್ಯಾಕ್ಟ್ ನ್ಯೂಕ್ಲಿಯರ್ ರಿಯಾಕ್ಟರ್ಗಳಾಗಿವೆ.
೩. ಖಾಸಗಿ ವಲಯದ ಸಿದ್ಧತೆ ಮತ್ತು ನ್ಯಾಯಾಂಗ ಪ್ರಕ್ರಿಯೆ:
-
ಅದಾನಿ ಪವರ್ ಉಪಕ್ರಮ: ಖಾಸಗಿ ವಲಯದ ಪಾಲ್ಗೊಳ್ಳುವಿಕೆಯ ಭಾಗವಾಗಿ ‘ಅದಾನಿ ಪವರ್’ ಸಂಸ್ಥೆಯು ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಸಂಭಾವ್ಯ ಯೋಜನೆಗಳಿಗಾಗಿ ರಾವತ್ಭಾಟಾ-ರಾಜ್ ಅಟಾಮಿಕ್ ಎನರ್ಜಿ ಲಿಮಿಟೆಡ್ ಮತ್ತು ಕೋಸ್ಟಲ್-ಮಹಾ ಅಟಾಮಿಕ್ ಎನರ್ಜಿ ಲಿಮಿಟೆಡ್ ಎಂಬ ಎರಡು ಪ್ರತ್ಯೇಕ ಅಂಗಸಂಸ್ಥೆಗಳನ್ನು ಸ್ಥಾಪಿಸಿದೆ.
-
ಸುಪ್ರೀಂ ಕೋರ್ಟ್ ವಿಚಾರಣೆ: ಶಾಂತಿ ಕಾಯ್ದೆಯ ಹೊಣೆಗಾರಿಕೆಯ ಮಿತಿಗಳು ಮತ್ತು ಪಾರದರ್ಶಕತೆ ನಿಯಮಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ.
-
ಕಾನೂನಿನ ಹಿನ್ನೆಲೆ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಡಿಸೆಂಬರ್ 20, 2025 ರಂದು ಈ ಐತಿಹಾಸಿಕ ಮಸೂದೆಗೆ ಅಂಕಿತ ಹಾಕಿದ್ದರು.
ಪರೀಕ್ಷಾ ದೃಷ್ಟಿಯಿಂದ ಪ್ರಮುಖಾಂಶಗಳು:
-
SHANTI Act, 2025: Sustainable Harnessing and Advancement of Nuclear Energy for Transforming India Act (ಭಾರತದ ಪರಮಾಣು ವಲಯವನ್ನು ಮುಕ್ತಗೊಳಿಸಿದ ನೂತನ ಕಾಯ್ದೆ).
-
ರದ್ದಾದ ಹಳೆಯ ಕಾಯ್ದೆಗಳು: ಪರಮಾಣು ಶಕ್ತಿ ಕಾಯ್ದೆ, 1962 ಮತ್ತು ನಾಗರಿಕ ಪರಮಾಣು ಹಾನಿ ಹೊಣೆಗಾರಿಕೆ ಕಾಯ್ದೆ, 2010.
-
ಪರಮಾಣು ಇಂಧನ ಸಾಮರ್ಥ್ಯ ಗುರಿ: 2047 ರ ವೇಳೆಗೆ 100 GWe.
-
SMR (Small Modular Reactor): ಸಾಂಪ್ರದಾಯಿಕ ರಿಯಾಕ್ಟರ್ಗಳಿಗಿಂತ ಚಿಕ್ಕದಾದ, ತ್ವರಿತ ನಿಯೋಜನೆಗೆ ಸೂಕ್ತವಾದ ಆಧುನಿಕ ಪರಮಾಣು ರಿಯಾಕ್ಟರ್.
-
FDI ಮಿತಿ: ಪರಮಾಣು ಜಂಟಿ ಉದ್ಯಮಗಳಲ್ಲಿ ಗರಿಷ್ಠ 49%.
