ಶ್ಲೋಕ – 09
ಶ್ರೋತ್ರಂ ಚಕ್ಷುಃ ಸ್ಪರ್ಶನಂ ಚ ರಸನಂ ಘ್ರಾಣಮೇವ ಚ ।
ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ ॥೯॥
ಶ್ರೋತ್ರಮ್ ಚಕ್ಷುಃ ಸ್ಪರ್ಶನಮ್ ಚ ರಸನಮ್ ಘ್ರಾಣಮ್ ಏವ ಚ ।
ಅಧಿಷ್ಠಾಯ ಮನಃ ಚ ಅಯಮ್ ವಿಷಯಾನ್ ಉಪಸೇವತೇ—ಕಿವಿ, ಕಣ್ಣು, ತೊಗಲು, ನಾಲಿಗೆ, ಮೂಗು ಮತ್ತು ಮನಸ್ಸಿನಲ್ಲಿ ನೆಲೆನಿಂತು ‘ಇವನು’ ವಿಷಯಗಳನ್ನು ಸವಿಯುತ್ತಾನೆ.
ಭಗವಂತ ನಮ್ಮ ಪ್ರತಿಯೊಂದು ಇಂದ್ರಿಯದಲ್ಲಿ ನಿಯಾಮಕನಾಗಿ ಆಯಾ ರೂಪದಲ್ಲಿ ನಿಂತು, ವಿಷಯಗಳನ್ನು ದುಃಖದ ಲೇಪವಿಲ್ಲದೆ ಗ್ರಹಿಸುತ್ತಾನೆ ಮತ್ತು ನಮಗೆ ವಿಷಯದ ಅನುಭವವನ್ನು ಕೊಡುತ್ತಾನೆ. ಈ ಶ್ಲೋಕ ಭಗವಂತನನ್ನು ಹೇಳುವುದರಿಂದ ಇಲ್ಲಿ ‘ಉಪ-ಸೇವತೆ’ ಮತ್ತು ‘ಅಧಿಷ್ಠಾಯ’ ಎನ್ನುವ ಎರಡು ವಿಶೇಷ ಪದಗಳನ್ನು ಬಳಸಿದ್ದಾರೆ. ಉಪ ಅಂದರೆ –ಉಪರಿ=ಎತ್ತರ. ನಾವು ಸುಖ-ದುಃಖದಲ್ಲಿ ಮುಳುಗಿ ವಿಷಯ ಭೋಗಿಸಿದರೆ, ಭಗವಂತ ಎಲ್ಲವನ್ನು ಮೀರಿನಿಂತು ದುಃಖದ ಲೇಪವಿಲ್ಲದೆ ಎಲ್ಲವನ್ನು ಅನುಭವಿಸುತ್ತಾನೆ. ಭಗವಂತ ಆಯಾ ಇಂದ್ರಿಯದಲ್ಲಿ ವಿಶೇಷ ರೂಪದಲ್ಲಿ ಸನ್ನಿಹಿತನಾಗಿ ನಿಯಮಿಸುವುದರಿಂದ ಇಲ್ಲಿ ‘ಅಧಿಷ್ಠಾಯ’ ಎನ್ನುವ ಪದವನ್ನು ಬಳಸಲಾಗಿದೆ. ಏವ ಮತ್ತು ಚ ಇವೆರಡನ್ನು ಈ ಶ್ಲೋಕದಲ್ಲಿ ಒಟ್ಟಾಗಿ ಬಳಸಲಾಗಿದೆ. ಇದು ಭಗವಂತನ ವಿಶೇಷ ಗುಣವನ್ನು ಬಿಂಬಿಸುತ್ತದೆ. ಆ+ಈ+ವ+ಚ=ಏವಚ( set of abbreviations-ಸಂಕ್ಷೇಪ-ಪದ)-ಅಂದರೆ ಯಾವುದೇ ದೋಷವಿಲ್ಲದ, ಸರ್ವಗುಣಗಳಿಂದ ಸಮುಚ್ಚಿತವಾದ ಜ್ಞಾನಾನಂದಮಯ ಭಗವಂತ.
