ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ…
(ಕಾಡಿನ ಸಂತ–ತೇಜಸ್ವಿ ಪುಸ್ತಕದ ಪರಿಷ್ಕೃತ ಆವೃತ್ತಿ)
ಬದುಕು ಆಕಸ್ಮಿಕವಷ್ಟೇ
ಒಮ್ಮೆ ಕುಪ್ಪಳಿಗೆ ಹೊರಟಿದ್ದೆವು. ನಾನೇ ಡ್ರೈವ್ ಮಾಡುತ್ತಿದ್ದೆ. ನನ್ನ ಪಕ್ಕದ ಆಸನದಲ್ಲಿ ತೇಜಸ್ವಿ ಕುಳಿತಿದ್ದರು. ನಮ್ಮೊಡನೆ ರಾಘವೇಂದ್ರ ಮತ್ತು ಬಾಪೂ ದಿನೇಶ್ ಇದ್ದರು. ದಾರಿಯುದ್ದಕ್ಕೂ ಅದು ಇದು ಮಾತನಾಡುತ್ತಿದ್ದಂತೆ ಆಲ್ದೂರು ದಾಟಿ ಶಂಕರ್ ಫಾಲ್ಸ್ ಎಂಬ ಪ್ರದೇಶ ಬಂತು. ಅಲ್ಲಿ ಚಲಿಸುವ ವಾಹನಗಳು ಒಂದು ನಿರ್ದಿಷ್ಟ ಸ್ಥಳಕ್ಕೆೆ್ಕ ಬಂದೊಡನೆಯೇ ಇದ್ದಕ್ಕಿದ್ದಂತೆಯೇ ರಸ್ತೆ ಮಧ್ಯದಲ್ಲಿಯೇ ಇಂಜಿನ್ ಆಫ್ ಆಗುವ ವಿಷಯ ಹೇಳಿದೆ. ಈ ಹಿಂದೆ ಎರಡು ಬಾರಿ ನನಗೆ ಆಗಿದ್ದ ಅನುಭವವನ್ನು ವಿವರಿಸಿದ್ದೆ. ಅಲ್ಲಿ ನಡೆದ ಕೊಲೆಗಳು, ಸಂಚರಿಸುವ ಪ್ರೇತಾತ್ಮಗಳ ಕುರಿತಾದ ವದಂತಿ, ನನಗೆ ತಿಳಿದಿದ್ದ ನಿಯಮಿತವಾಗಿ ಸಂಚರಿಸುವ ಅನೇಕರ ಅಭಿಪ್ರಾಯವನ್ನು ಹೇಳಿದೆ.
ಕೆಲ ಪ್ರದೇಶಗಳಲ್ಲಿ ಇರಬಹುದಾದ ವಿಶೇಷ ಅಯಸ್ಕಾಂತೀಯ ಗುಣಗಳು ವಾಹನದ ಇಂಜಿನ್ ಚಲನೆಯ ಮೇಲೆ ಬೀರುವ ಪರಿಣಾಮವನ್ನು ವಿವರಿಸಿದ ತೇಜಸ್ವಿ ನಮ್ಮ ಹಲವು ಅನುಮಾನಗಳಿಗೆ ಉತ್ತರ ನೀಡಿದರು. ಬರ್ಮುಡಾ ಟ್ರಾಯಾಂಗಲ್ ವಿಚಾರವಾಗಿ ಚರ್ಚಿಸಿದೆವು. ಕೆಲ ಸಮಯ ಮನುಷ್ಯರ ಮೆದುಳು ಆಫ್ ಆದಂತಾಗಿ ಭೌತಿಕ ಚಟುವಟಿಕೆಗಳು ಮಾತ್ರ ಯಾವುದೇ ಅಡೆತಡೆಯಿಲ್ಲದೇ ನಡೆಯುವುದು, ಈ ನಡುವಿನ ಮನಸ್ಸಿನ ರೆರ್ಕಾಡಿಂಗ್ ಅಥವಾ ಜಾಗೃತಾವಸ್ಥೆ ಕಾಲದ ಮಾನದಂಡದಲ್ಲಿ ಬ್ಲಾಂಕ್ ಆಗುವ ಹಾಗೂ ಯಾವುದೋ ಸುಪ್ತಲೋಕದ ಅರಿವಿನ ನಡುವೆ ಮೈಲುಗಟ್ಟಲೇ ಹಾದಿಯಲ್ಲಿ ಎದುರಾಗುವ ತಿರುವುಗಳು, ಅಡ್ಡ ಬರುವ ವಾಹನಗಳನ್ನು ನಿಭಾಯಿಸಿ ಗಮ್ಯ ಸ್ಥಾನ ಮುಟ್ಟುವ ಸಾಧ್ಯತೆಗಳ ಬಗ್ಗೆ ಚರ್ಚಿಸಿದೆವು. ನಮ್ಮದಲ್ಲದ ಯಾವುದೋ ಅಪರಿಚಿತ ಲೋಕದ ಗುಂಗಿನಲ್ಲಿಯೇ ವಾಹನ ಚಲಾಯಿಸುತಿದ್ದ ನನ್ನನ್ನು “ನೀನೀಗ ಎಚ್ಚರದ ಸ್ಥಿತಿಯಲ್ಲಿ ಡ್ರೈವ್ ಮಾಡುತ್ತಿದ್ದೀಯ ತಾನೇ?” ಎಂದು ಗದರಿಸಿದ್ದರು.

ಆಕಸ್ಮಿಕವೊಂದರಲ್ಲಿ ಇಪ್ಪತ್ತೈದು ವಯಸ್ಸಿನ ನನ್ನ ತಮ್ಮ ತೀರಿ ಹೋದಾಗ ತೇಜಸ್ವಿ “ ಎಂಥಾ ಕೆಲಸ ಆಗೋಯ್ತು ಮಾರಾಯ. ಕೈಕಾಲು ಕಳ್ಕೊಂಡು ತೆವಳಿಕೊಂಡು ಬದುಕುವುದಿದೆಯಲ್ಲಾ ಅದೊಂದು ನರಕ” ಎಂದು ತೀರಾ ನೋವಿನಿಂದ ನುಡಿದಿದ್ದರು. ಭುಜ ಅಮುಕಿ “ಏನು ಮಾಡೋಕಾಗುತ್ತೆ ಹೇಳು, ಎಲ್ಲಾ ಅವರವರ ಹಣೆಬರಹ” ಎಂದು ಬದುಕಿನ ವಾಸ್ತವಗಳಿಗೆ ಅವರು ಸ್ಪಂದಿಸಿದ ರೀತಿ ಕೇಳಿ ಅರಗಿಸಿಕೊಳ್ಳಲು ಕಷ್ಟವಾದರೂ ಹೌದಲ್ವಾ? ಎನಿಸಿತು.
ಹಣೆಬರಹ ಎಂದರಲ್ಲ ಹಾಗಾದರೆ ಎಲ್ಲವೂ ಪೂರ್ವನಿರ್ಧರಿತವೇ? ಹಾಗಂತ ಒಂದಿದ್ದರೆ ಅದನ್ನೆಲ್ಲ ನಿರ್ಧರಿಸುವ ಚೈತನ್ಯ ಯಾವುದು? ಹಾಗಾದರೆ ಗ್ರೀಕ್ನ ದುರಂತ ನಾಟಕಗಳ ಕರ್ತ ಸಫೋಕ್ಲಿಸ್ `ಅಕಸ್ಮಿಕಗಳ ಮೇಲೆ ಕಟ್ಟಿಟ್ಟಿದ್ದು ಈ ಬದುಕು‘ ಎಂದದ್ದು ಯಾಕೆ? ಎಂದು ಹಲವು ದಿನ ಏಕಾಂತದಲ್ಲಿ ಕುಳಿತು ಮೆದುಳು ಧಿಮ್ ಎನ್ನುವವರೆಗೂ ಯೋಚಿಸಿ ಯೋಚಿಸಿ ಕಡೆಗೆ ನನಗನ್ನಿಸಿದ್ದು ಯಾವುದೂ ಪೂರ್ವನಿರ್ಧರಿತವಲ್ಲ, ಬದುಕು ಆಕಸ್ಮಿಕವಷ್ಟೆ. ಹಾಗೆಯೇ ಘಟನೆಗಳು ಸಂಭವಿಸುತ್ತವೆ ಅಷ್ಟೆ. ವಾಸ್ತವದಲ್ಲಿ `ರೆ’ ಗಳಿಗೆ ಅರ್ಥವೇ ಇಲ್ಲ.
ಮುಂದುವರೆಯುತ್ತದೆ…
– ಧನಂಜಯ ಜೀವಾಳ ಬಿ.ಕೆ. ಮೂಡಿಗೆರೆ
9448421946

