ರಾಮನಾಥಪುರ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ರಸ್ತೆಯಲ್ಲಿ ಸಂಚರಿಸಲು ಆತಂಕಪಡುವಂತಾಗಿದೆ. ಕೂಡಲೇ ಸಂಬಂಧಪಟ್ಟ ತಾಲೂಕು ಆಡಳಿತ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸುರಕ್ಷತೆ ಒದಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಎಸ್. ಶಂಕರ್ ಒತ್ತಾಯಿಸಿದರು.
ರಾಮನಾಥಪುರದ ಬಸವೇಶ್ವರ ವೃತ್ತದಲ್ಲಿ ಮಾತನಾಡಿದ ಅವರು, ಪಟ್ಟಣದ ವಿವಿಧ ರಸ್ತೆಗಳಲ್ಲಿ ಹಗಲು-ರಾತ್ರಿ ಎನ್ನದೆ ಬೀದಿ ನಾಯಿಗಳು ಗುಂಪು ಗುಂಪಾಗಿ ಸಂಚರಿಸುತ್ತಿವೆ. ಇತ್ತೀಚೆಗೆ ದೇವಾಲಯದ ರಸ್ತೆ ಹಾಗೂ ಬಸವೇಶ್ವರ ವೃತ್ತದ ಸಮೀಪ ಬೀದಿ ನಾಯಿಗಳು ಸಾರ್ವಜನಿಕರನ್ನು ಕಚ್ಚಿರುವ ಘಟನೆಗಳು ನಡೆದಿವೆ. ದೇವಾಲಯಕ್ಕೆ ಆಗಮಿಸುವ ಭಕ್ತರ ಮೇಲೆಯೂ ನಾಯಿಗಳು ದಾಳಿ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬರುತ್ತಿವೆ ಎಂದರು.
ರಾಮನಾಥಪುರದ ಬಸವೇಶ್ವರ ವೃತ್ತ, ಕೋಟವಾಳು, ಶ್ರೀ ಸುಬ್ರಹ್ಮಣ್ಯಸ್ವಾಮಿ ಹಾಗೂ ರಾಮೇಶ್ವರಸ್ವಾಮಿ ದೇವಾಲಯಗಳಿಗೆ ಪ್ರತಿನಿತ್ಯ ನೂರಾರು ಭಕ್ತರು ಆಗಮಿಸುತ್ತಾರೆ. ಇಂತಹ ಜನನಿಬಿಡ ಪ್ರದೇಶಗಳಲ್ಲಿ ಬೀದಿ ನಾಯಿಗಳು ಹಿಂಡು ಹಿಂಡಾಗಿ ಓಡಾಡುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಹಾಗೂ ಹೊರಗಿನಿಂದ ಬರುವ ಸಾರ್ವಜನಿಕರು ಆತಂಕದಲ್ಲಿ ಸಂಚರಿಸುವಂತಾಗಿದೆ ಎಂದು ಹೇಳಿದರು.
ಸಂತೆ ದಿನಗಳಲ್ಲಿ ಬೇರೆ ಬೇರೆ ಪ್ರದೇಶಗಳಿಂದಲೂ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಮಸ್ಯೆ ಮತ್ತಷ್ಟು ಉಲ್ಬಣಿಸುತ್ತಿದೆ. ರಾತ್ರಿ ವೇಳೆ ನಾಯಿಗಳ ಬೊಗಳುವಿಕೆ ಹಾಗೂ ಕಚ್ಚಾಟದಿಂದ ಸಾರ್ವಜನಿಕರಿಗೆ ನಿದ್ರೆಯಲ್ಲೂ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಆಹಾರ ಪದಾರ್ಥಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ಹಾಗೂ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡದಿರುವುದು ನಾಯಿಗಳ ಹಾವಳಿ ಹೆಚ್ಚಾಗಲು ಕಾರಣವಾಗಿದೆ ಎಂದು ಶಂಕರ್ ತಿಳಿಸಿದರು.

ಬೀದಿ ನಾಯಿಗಳು ರಸ್ತೆಯಲ್ಲಿ ಅಡ್ಡಾಡುವುದರಿಂದ ವಾಹನ ಸವಾರರಿಗೂ ಅಪಾಯ ಎದುರಾಗಿದೆ. ನಾಯಿಗಳು ವಾಹನಗಳಿಗೆ ಅಡ್ಡಬಂದು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ. ಪಟ್ಟಣದಲ್ಲಿರುವ ಮಾಂಸದ ಅಂಗಡಿಗಳ ಮುಂದೆ ನಾಯಿಗಳು ಗುಂಪುಗೂಡುವುದು ಸಾಮಾನ್ಯವಾಗಿದ್ದು, ಸಾರ್ವಜನಿಕರ ಮೇಲೂ ದಾಳಿ ನಡೆಸಲು ಮುಂದಾಗುತ್ತಿವೆ ಎಂದು ದೂರಿದರು.
ಮಹಿಳೆಯರು, ಮಕ್ಕಳು ಹಾಗೂ ಹಿರಿಯ ನಾಗರಿಕರು ಮುಂಜಾನೆ ಮತ್ತು ಸಂಜೆ ವಾಕಿಂಗ್ ಹೋಗಲು ಆತಂಕಪಡುವಂತಾಗಿದೆ. ಮಕ್ಕಳು ಶಾಲೆಗೆ ತೆರಳುವಾಗಲೂ ಬೀದಿ ನಾಯಿಗಳ ದಾಳಿಯ ಭೀತಿ ಎದುರಿಸುತ್ತಿದ್ದಾರೆ. ಆದ್ದರಿಂದ ಪಂಚಾಯಿತಿ ಅಧಿಕಾರಿಗಳು ಕೂಡಲೇ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಿ ಸಾರ್ವಜನಿಕರಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಬೀದಿ ನಾಯಿಗಳನ್ನು ನಿಯಂತ್ರಿಸಲು ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳಬೇಕು. ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್.ಎಸ್. ಶಂಕರ್ ಎಚ್ಚರಿಸಿದರು.
ರೇಬೀಸ್ ಲಸಿಕೆ, ಸಂತಾನಹರಣಕ್ಕೆ ಕ್ರಮ
ಈ ಕುರಿತು ರಾಮನಾಥಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ಎನ್. ಕುಮಾರಸ್ವಾಮಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ರೇಬೀಸ್ ಚುಚ್ಚುಮದ್ದು ನೀಡಲು ನಿರ್ಧರಿಸಲಾಗಿದೆ. ಆದಷ್ಟು ಬೇಗ ಸಂತಾನಹರಣ ಚಿಕಿತ್ಸೆ ನಡೆಸುವ ಮೂಲಕ ಬೀದಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
– ಕುಮಾರಸ್ವಾಮಿ ಕೆ.ಎಂ.
