ತುಮಕೂರು: ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನಖರ್ಗೆಅವರು ಭಾಷಣ ಮಾಡಿದ ಜಾಗವನ್ನು ಗೋ ಮೂತ್ರ ಮತ್ತು ಸಗಣಿಯಿಂದ ಸ್ವಚ್ಚಗೊಳಿಸಿದ ಶ್ರೀರಾಮ ಸೇನೆ ಹಾಗೂ ಬಿಜೆಪಿಯ ಪಕ್ಷದ ಅಂಗ ಸಂಸ್ಥೆಗಳ ಕ್ರಮವನ್ನು ಖಂಡಿಸಿ ಇಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ನೇತೃತ್ವದಲ್ಲಿ ಟೌನ್ಹಾಲ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಟೌನ್ಹಾಲ್ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಯ ಮುಂಭಾಗದಿಂದ ಬಿಜಿಎಸ್ ವೃತ್ತದವರೆಗೆ ಪಾದಯಾತ್ರೆ ನಡೆಸಿ, ಕೆಲ ಕಾಲ ಮಾನವ ಸರಪಳಿ ನಿರ್ಮಿಸಿದ ಕಾಂಗ್ರೆಸ್ ಕಾರ್ಯಕರ್ತರು,ದೇಶದಲ್ಲಿ ಇಂದಿಗೂ ಅಸ್ಪೃಷ್ಯತೆ ಆಚರಣೆಯಲ್ಲಿದೆ ಎಂಬುದಕ್ಕೆ ಉತ್ತರಾಖಂಡದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿಯಾಗಿದೆ.ಕೇಂದ್ರ ಸರಕಾರ ಮತ್ತು ಉತ್ತರಾಖಂಡದ ಸರಕಾರಗಳು ಮೈದಾನವನ್ನು ಗೋ ಮೂತ್ರ ಮತ್ತು ಸಗಣಿಯಿಂದ ಸ್ವಚ್ಚಗೊಳಿಸಿ ಕಿಡಿಗೇಡಿಗಳನ್ನು ಬಂಧಿಸಿ, ಕಠಿಣ ಕಾನೂನು ಕ್ರಮಜರುಗಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಅಹಮದ್,ಶ್ರೀರಾಮಸೇನೆಯ ಕಾರ್ಯಕರ್ತರು ಮಾಡಿರುವ ಈ ಘೋರಕೃತ್ಯ ಇಡೀ ರಾಷ್ಟçವೇ ತಲೆತಗ್ಗಿಸುವಂತಹ ವಿಚಾರವಾಗಿದೆ.ಭಾರತಕ್ಕೆ ಸ್ವಾತಂತ್ರ ಬಂದು 80 ವರ್ಷ ಕಳೆದರೂ ಇಂದಿಗೂ ಮನುಷ್ಯರನ್ನು ಮನುಷ್ಯರೆಂದು ಒಪ್ಪಿಕೊಳ್ಳದ ಮುನುವಾದಿಗಳ ಈ ನಡೆ,ಭಾರತದಲ್ಲಿ ಅಸ್ಪೃಷ್ಯತೆ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.ಈ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ35ರಷ್ಟು ದಲಿತ ಸಮುದಾಯವಿದೆ.ಹಿಂದೂ ನಾವೆಲ್ಲ ಒಂದು ಎನ್ನುವವರು ಈಗ ಎಲ್ಲಿದ್ದಾರೆ.ಅವರಿಗೆ ಇದು ತಪ್ಪು ಎನಿಸುವುದಿಲ್ಲವೇ? ನಿಜಕ್ಕೂ ನಿಮಗೆ ಮನ ಸಾಕ್ಷಿ ಇದ್ದರೆ ಕೂಡಲೇ ಮೈದಾನವನ್ನು ಗೋ ಮೂತ್ರ ಮತ್ತು ಸಗಣಿಯಿಂದ ಸ್ವಚ್ಚಗೊಳಿಸಿದ ಮತ್ತು ಅದನ್ನು ಮಾಧ್ಯಮದ ಮುಂದೆ ಸಮರ್ಥಿಸಿಕೊಂಡ ಜನರನ್ನು ಕೂಡಲೇ ಬಂಧಿಸಿ, ಮುಂದೆ ಇಂತಹ ಘಟನೆಗಳು ಜರುಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಾಜಿ ಶಾಸಕ ಡಾ.ಎಸ್.ರಫೀಕ್ಅಹಮದ್ ಮಾತನಾಡಿ,ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಪ್ರಕಾರದೇಶದಲ್ಲಿ ಅಸ್ಪೃಷ್ಯತೆ ತೊಲಗಿದಾಗ ಮಾತ್ರ ನಿಜವಾದ ಸ್ವಾತಂತ್ರ ಎಂದಿದ್ದರು. ಆದರೆ ದೇಶ ಬ್ರಿಟಿಷರಿಂದ ಸ್ವಾತಂತ್ರ ಪಡೆದರು, ಪಟ್ಟಭದ್ರ ಹಿತಾಸಕ್ತಿಗಳ ಕಪಿಮುಷ್ಠಿಯಲ್ಲಿಯೇ ಇದೆ ಎಂಬುದಕ್ಕೆ ಆಗಸ್ಟ್ 09ರಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನಖರ್ಗೆ ಭಾಷಣ ಮಾಡಿದ ಉತ್ತರಾಖಂಡದ ರಾಮಲೀಲಾ ಮೈದಾನವನ್ನು ಗೋ ಮೂತ್ರ ಮತ್ತು ಸಗಣಿಯಿಂದ ಸ್ವಚ್ಚಗೊಳಿಸಿರುವುದೇ ಸಾಕ್ಷಿಯಾಗಿದೆ. ಇಂತಹ ಘಟನೆ ಮರುಕಳುಹಿಸಿದರೆ ಕಾಂಗ್ರೆಸ್ ಉಗ್ರ ಹೋರಾಟ ನಡೆಸಲಿದೆ ಎಂದರು.
ಪ್ರತಿಭಟನೆಯಲ್ಲಿ ಮುಖಂಡರಾದ ಅತೀಕ್ ಅಹಮದ್,ನಯಾಜ್ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಫೈಯಾಜ್, ಮಹೇಶ್, ಜಿಲ್ಲಾ ವಕ್ತಾರರಾದ ಶ್ರೀಮತಿ ಕೆ.ಎಂ.ಸುಜಾತ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
– ಚಂದ್ರಚೂಡ ಕೆ.ಬಿ.
