ಹಾಸನ: ಕಲೆಗೆ ತವರೂರಾದ ಹಾಸನದಲ್ಲಿ ಹಲವು ಬಗೆಯ ಕಲಾ ಪ್ರಕಾರಗಳು ನಿರಂತರವಾಗಿ ಬೆಳೆದು, ಪೋಷಿಸಲ್ಪಡುತ್ತಿವೆ. ಅವುಗಳಲ್ಲಿ ಚಿತ್ರಕಲೆಯೂ ಪ್ರಮುಖವಾದುದು. ಚಿತ್ರಕಲೆಯನ್ನೇ ತಮ್ಮ ವ್ಯಾಸಂಗದ ಆಯ್ಕೆಯಾಗಿ ಮಾಡಿಕೊಂಡಿರುವ ಮಂಜುಳಾ ಅವರು ನಗರದ ಅರಳಿಕಟ್ಟೆ ಸರ್ಕಲ್ ಬಳಿಯ ಸಂಸ್ಕೃತ ಭವನದಲ್ಲಿ ತಮ್ಮ ಕಲಾ ಪ್ರತಿಭೆಯನ್ನು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದ ಮೂಲಕ ಅನಾವರಣಗೊಳಿಸಿದ್ದಾರೆ.
ರಾಜಘಟ್ಟದ ರಂಗೇಗೌಡ–ಹನುಮಮ್ಮ ದಂಪತಿಯ ಪುತ್ರಿ ಮಂಜುಳಾ ಅವರಿಗೆ ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಅಪಾರ ಆಸಕ್ತಿ. ಪಿಯುಸಿ ನಂತರ ಹಾಸನದ ಶಾಂತಲಾ ಚಿತ್ರಕಲಾ ಶಾಲೆಯಲ್ಲಿ ಐದು ವರ್ಷಗಳ ಕಾಲ ಚಿತ್ರಕಲಾ ಶಿಕ್ಷಣ ಪಡೆದ ಅವರು, ಬಳಿಕ ಕುವೆಂಪು ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕಿಯಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಹಾಸನದ ಪ್ರತಿಷ್ಠಿತ ಯುರೋ ಸ್ಕೂಲ್ನಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಸಗೆಶಿಯಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಚಿತ್ರಕಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೃತ್ತಿಯ ಜತೆಗೆ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಮಕ್ಕಳಿಗೂ ಬಿಡುವಿನ ವೇಳೆಯಲ್ಲಿ ತರಬೇತಿ ನೀಡುತ್ತಿರುವ ಮಂಜುಳಾ ಅವರ ಮಾರ್ಗದರ್ಶನದಲ್ಲಿ ಹಲವು ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಕ್ಯಾನ್ವಾಸ್ ಪೇಂಟಿಂಗ್, ಅಕ್ರಿಲಿಕ್ ಪೇಂಟ್ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಕಲಾಕೃತಿಗಳನ್ನು ರಚಿಸುವಲ್ಲಿ ಮಂಜುಳಾ ಅವರು ಪರಿಣತಿ ಹೊಂದಿದ್ದಾರೆ. ಗಂಜಿಫಾ ಚಿತ್ರಕಲೆಯಲ್ಲಿಯೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಕುಂಚದ ಸ್ಪರ್ಶದಲ್ಲಿ ವಿವಿಧ ಬಗೆಯ ಪಕ್ಷಿಗಳು ಜೀವತಳೆದು ಹಾರಾಡುವಂತೆ ಕಾಣಿಸಿದರೆ, ಹೂವುಗಳು ಅರಳಿ ನಿಂತು ನೋಡುಗರ ಮನಸ್ಸಿಗೆ ಮುದ ನೀಡುತ್ತವೆ. ಅವುಗಳ ಚಿತ್ರಣಕ್ಕೆ ಪರಿಮಳವಿಲ್ಲದಿದ್ದರೂ, ಕಲಾವಿದೆಯ ಭಾವನೆ ಮತ್ತು ಸೃಜನಶೀಲತೆಯ ಪರಿಮಳವನ್ನು ಅನುಭವಿಸಬಹುದು.

ಈವರೆಗೆ ಹಲವು ಸಮೂಹ ಚಿತ್ರಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿರುವ ಮಂಜುಳಾ ಅವರು ಇದೀಗ ತಮ್ಮದೇ ಆದ ಏಕವ್ಯಕ್ತಿ ಕಲಾ ಪ್ರದರ್ಶನದ ಮೂಲಕ ಕಲಾಸಕ್ತರ ಗಮನ ಸೆಳೆದಿದ್ದಾರೆ. ಪ್ರದರ್ಶನದಲ್ಲಿನ ಒಂದೊಂದೇ ಕಲಾಕೃತಿಯೂ ಅವರ ಕಲ್ಪನೆ, ಪರಿಶ್ರಮ ಹಾಗೂ ಕಲೆಯ ಮೇಲಿನ ಪ್ರೀತಿಯನ್ನು ಪ್ರತಿಬಿಂಬಿಸುತ್ತಿದೆ.

ಪ್ರದರ್ಶನವನ್ನು ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ, “ಮಂಜುಳಾ ಮೇಡಂ, ನಿಮ್ಮ ಕಲಾಕೃತಿಗಳ ಬಗ್ಗೆ ನೀವೇ ವಿವರಿಸಿ” ಎಂದು ಕೇಳಿದಾಗ, “ಹೋ, ಶೂರ್ ಸರ್” ಎಂದು ಉತ್ಸಾಹದಿಂದ ಪ್ರತಿಕ್ರಿಯಿಸಿದ ಅವರು, ಒಂದೊಂದೇ ಕಲಾಕೃತಿಯ ಹಿಂದಿನ ಪರಿಕಲ್ಪನೆ, ಅದರ ರಚನಾ ವಿಧಾನ ಹಾಗೂ ತಾವು ವ್ಯಕ್ತಪಡಿಸಲು ಬಯಸಿದ ಭಾವನೆಯನ್ನು ವಿವರಿಸುತ್ತಾ ಸಾಗಿದರು. ಅವರ ವಿವರಣೆಯನ್ನು ಆಲಿಸುತ್ತಾ, ಪ್ರತಿಯೊಂದು ಕಲಾಕೃತಿಯೂ ಕೇವಲ ಬಣ್ಣಗಳ ಸಂಯೋಜನೆಯಲ್ಲ; ಅದು ಕಲಾವಿದೆಯ ಒಳಗಿನ ಭಾವನೆಗಳ ಸುಂದರ ಅಭಿವ್ಯಕ್ತಿ ಎಂಬುದು ಅರಿವಾಗುತ್ತದೆ.

ಮಂಜುಳಾ ಅವರ ಈ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವು ಅವರ ಕಲಾ ಪಯಣದ ಮತ್ತೊಂದು ಮಹತ್ವದ ಹೆಜ್ಜೆಯಾಗಿದ್ದು, ಹಾಸನದ ಚಿತ್ರಕಲಾ ಕ್ಷೇತ್ರಕ್ಕೆ ಹೊಸ ಮೆರುಗು ನೀಡಿದೆ.
– ಗೊರೂರು ಅನಂತರಾಜು, ಹಾಸನ
ಮೊಬೈಲ್: 9449462879
ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3ನೇ ಕ್ರಾಸ್,
ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ–573201.
