ಹಾಸನ: ಹೊಳೆನರಸೀಪುರ ತಾಲ್ಲೂಕಿನ ಕಡವಿನ ಬಾಚೀಹಳ್ಳಿ ಗ್ರಾಮದ ಸ್ವಾಮಿಶೆಟ್ಟಿ, ತಿಮ್ಮಶೆಟ್ಟಿ ಹಾಗೂ ಶಿವಶೆಟ್ಟಿ ಅವರ ಕುಟುಂಬದ ವಿರುದ್ಧ ಮಾಡಲಾಗಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್ ತಿಳಿಸಿದರು.
ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ಕುಮಾರಶೆಟ್ಟಿ ಹಾಗೂ ಅವರ ಪತ್ನಿ ಮಹಾದೇವಿ ಅವರು ಆ.13ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಡಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು.
ಹಳ್ಳಿ ಮೈಸೂರು ಹೋಬಳಿಯ ತಿಮ್ಮಶೆಟ್ಟಿ-ಮಂಚಮ್ಮ ದಂಪತಿಗೆ ವೆಂಕಟರಾಮಶೆಟ್ಟಿ, ನಂಜಮ್ಮ, ಸ್ವಾಮಿಶೆಟ್ಟಿ, ಕುಮಾರಶೆಟ್ಟಿ, ತಿಮ್ಮಶೆಟ್ಟಿ ಹಾಗೂ ಶಿವಶೆಟ್ಟಿ ಸೇರಿದಂತೆ ಆರು ಮಂದಿ ಮಕ್ಕಳಿದ್ದಾರೆ. ತಿಮ್ಮಶೆಟ್ಟಿ ಅವರಿಗೆ ಸೇರಿದ 4.25 ಎಕರೆ ಜಮೀನನ್ನು ಐವರು ಗಂಡು ಮಕ್ಕಳಿಗೆ ಹಂಚಿಕೆ ಮಾಡಲಾಗಿತ್ತು. ಆದರೆ ತಿಮ್ಮಶೆಟ್ಟಿ ನಿಧನದ ನಂತರವೂ ಜಮೀನು ಮಂಚಮ್ಮ ಅವರ ಹೆಸರಿನಲ್ಲೇ ಇದೆ ಎಂದು ಹೇಳಿದರು.
ಮನೆಯ ಸಮೀಪದ ಸರ್ವೆ ನಂ.24/50ರ 4 ಗುಂಟೆ ಹಾಗೂ ಸರ್ವೆ ನಂ.24/7ರ 5 ಗುಂಟೆ ಸೇರಿದಂತೆ ಒಟ್ಟು 9 ಗುಂಟೆ ಜಮೀನನ್ನು ಖರೀದಿಸಿ ಮಂಚಮ್ಮ ಅವರ ಹೆಸರಿನಲ್ಲಿ ನೋಂದಣಿ ಮಾಡಲಾಗಿತ್ತು. ಮನೆ ನಿರ್ಮಿಸಿಕೊಳ್ಳಲು ಈ 9 ಗುಂಟೆ ಜಮೀನಿನಲ್ಲಿ ಕುಮಾರಶೆಟ್ಟಿ, ತಿಮ್ಮಶೆಟ್ಟಿ ಹಾಗೂ ಶಿವಶೆಟ್ಟಿ ಅವರಿಗೆ ತಲಾ 3 ಗುಂಟೆಯಂತೆ ನೀಡಲಾಗಿತ್ತು ಎಂದು ತಿಳಿಸಿದರು.
ಕುಮಾರಶೆಟ್ಟಿ ಹಾಗೂ ಮಹಾದೇವಿ ಅವರು ತಮ್ಮ ಪಾಲಿನ 3 ಗುಂಟೆಯಲ್ಲಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಶಿವಶೆಟ್ಟಿ ಅವರು ತಮ್ಮ ಪಾಲಿನ 3 ಗುಂಟೆ ಜಾಗದ ಬದಲಿಗೆ ಬೇರೆ ನಿವೇಶನ ಪಡೆದು ಮನೆ ನಿರ್ಮಿಸಿಕೊಂಡಿದ್ದಾರೆ. ತಿಮ್ಮಶೆಟ್ಟಿ ಅವರು ತಮ್ಮ ಪಾಲಿನ 3 ಗುಂಟೆ ಜಾಗದಲ್ಲೇ ಮನೆ ನಿರ್ಮಿಸುತ್ತಿದ್ದು, ಈಗಾಗಲೇ ಅಡಿಪಾಯ ಹಾಗೂ ಕಂಬಗಳನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು.
ಕುಮಾರಶೆಟ್ಟಿ ದಂಪತಿಯ ಪುತ್ರ ಚಂದನ್ ಕಳೆದ ಮಾರ್ಚ್ನಲ್ಲಿ ಅಸ್ವಸ್ಥಗೊಂಡು ಹಾಸನದ ಸ್ಪರ್ಶ್ ಎನ್ಡಿಆರ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಹಳ್ಳಿಮೈಸೂರು ಪೊಲೀಸ್ ಠಾಣೆಯ ಸಿಬ್ಬಂದಿ ಅವರ ಹೇಳಿಕೆ ಪಡೆದಿದ್ದರು. ತಾವು ಕೆಮ್ಮಿನ ಸಿರಪ್ ಎಂದು ಭಾವಿಸಿ ಔಷಧಿ ಸೇವಿಸಿದ್ದಾಗಿ ಹಾಗೂ ಯಾವುದೇ ಭಯ ಅಥವಾ ಕಿರುಕುಳ ಇಲ್ಲ ಎಂದು ಚಂದನ್ ಹೇಳಿಕೆ ನೀಡಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ದಾಖಲಿಸಲಾಗಿತ್ತು. ಬೆಂಗಳೂರಿನಲ್ಲಿ ನೀಡಿರುವ ಹೇಳಿಕೆಯ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕು ಎಂದು ಪ್ರಸನ್ನಕುಮಾರ್ ಒತ್ತಾಯಿಸಿದರು.
ಚಂದನ್ ಮೃತಪಟ್ಟ ಬಳಿಕ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಅವರ ಸೋದರರಾದ ಸ್ವಾಮಿಶೆಟ್ಟಿ ₹1.30 ಲಕ್ಷ, ತಿಮ್ಮಶೆಟ್ಟಿ ₹1.50 ಲಕ್ಷ ಹಾಗೂ ಶಿವಶೆಟ್ಟಿ ₹1.50 ಲಕ್ಷ ಹಣಕಾಸಿನ ನೆರವು ನೀಡಿದ್ದರು. ಇದಕ್ಕೆ ಗ್ರಾಮಸ್ಥರೇ ಸಾಕ್ಷಿಯಾಗಿದ್ದಾರೆ. ಇದೀಗ ಇದಕ್ಕೆ ವಿರುದ್ಧವಾಗಿ ಬೇರೆ ರೀತಿಯ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.
ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಸುಳ್ಳು ಆರೋಪ ಮಾಡಲಾಗಿದೆ ಎಂದು ಆರೋಪಿಸಿದ ಅವರು, ಸಂಬಂಧಪಟ್ಟ ಅಧಿಕಾರಿಗಳು ಎರಡೂ ಕಡೆಯ ದಾಖಲೆಗಳನ್ನು ಪರಿಶೀಲಿಸಬೇಕು. ಕಂದಾಯ ಅಧಿಕಾರಿಗಳು ಎರಡೂ ಕಡೆಯವರ ಹೇಳಿಕೆ ಹಾಗೂ ದಾಖಲೆಗಳನ್ನು ಪರಿಶೀಲಿಸಿ ನ್ಯಾಯಯುತ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆಯೂ ಪ್ರಕರಣದ ಎಲ್ಲ ಅಂಶಗಳನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಭೀಮ್ ಆರ್ಮಿ ಹೊಳೆನರಸೀಪುರ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಹಾಸನ ತಾಲೂಕು ಅಧ್ಯಕ್ಷ ಚೇತನ್, ಸ್ವಾಮಿಶೆಟ್ಟಿ, ಕುಮಾರ್ ಹಾಗೂ ನವೀನ್ ಉಪಸ್ಥಿತರಿದ್ದರು.
