ಕೆ.ಆರ್.ಪೇಟೆ, ಆ.19: ಉತ್ತರಾಖಂಡದ ಹಾಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಹಾಗೂ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಬಳಿಕ ಶುದ್ಧೀಕರಿಸಿ ಹೋಮ–ಹವನ ನಡೆಸಲಾಗಿದೆ ಎಂಬ ಆರೋಪವನ್ನು ಖಂಡಿಸಿ, ಕೆ.ಆರ್.ಪೇಟೆ ತಾಲ್ಲೂಕು ದಲಿತಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಎಂ.ಕೆ. ಬೊಮ್ಮೇಗೌಡ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾಕಾರರು ಮಾತನಾಡಿ, ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ಮತ್ತು ಗೌರವದ ಹಕ್ಕನ್ನು ನೀಡಿದೆ. ಜಾತಿಯ ಆಧಾರದ ಮೇಲೆ ವ್ಯಕ್ತಿಯೊಬ್ಬರನ್ನು ಅವಮಾನಿಸುವುದು ಅಥವಾ ಅವರು ಬಳಸಿದ ಸ್ಥಳವನ್ನು ಶುದ್ಧೀಕರಿಸುವಂತಹ ಆಚರಣೆಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಪ್ರತಿಯೊಬ್ಬರೂ ಗೌರವಿಸಬೇಕು. ಜಾತಿ ಮತ್ತು ಅಸ್ಪೃಶ್ಯತೆಯಂತಹ ಸಾಮಾಜಿಕ ಪಿಡುಗುಗಳಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕು. ಆರೋಪಗಳು ಸತ್ಯವೆಂದು ದೃಢಪಟ್ಟಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಹಾಗೂ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಸಂವಿಧಾನದ ಸಂದೇಶವನ್ನು ಜನರಲ್ಲಿ ಬಿತ್ತುವ ಮೂಲಕ ಶಾಂತಿ, ಸೌಹಾರ್ದತೆ ಹಾಗೂ ಸಾಮಾಜಿಕ ಸಾಮರಸ್ಯವನ್ನು ಕಾಪಾಡಬೇಕು ಎಂದು ಮುಖಂಡರು ಕರೆ ನೀಡಿದರು.
ಪ್ರತಿಭಟನೆಯಲ್ಲಿ ದಲಿತಪರ ಒಕ್ಕೂಟದ ಅಧ್ಯಕ್ಷ ರಾಜಯ್ಯ, ಉಪಾಧ್ಯಕ್ಷರಾದ ಬಸ್ತಿರಂಗಪ್ಪ, ಡಿ. ಪ್ರೇಮ್ ಕುಮಾರ್, ಕರ್ನಾಟಕ ರಾಜ್ಯ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಎಂ.ವಿ. ಕೃಷ್ಣ, ಜಿಲ್ಲಾ ಸಂಘಟನಾ ಸಂಚಾಲಕ ಸಂತೋಷ್ ಕುಮಾರ್, ತಾಲ್ಲೂಕು ಡಿಎಸ್ಎಸ್ ಸಂಚಾಲಕ ನಾಟನಹಳ್ಳಿ ಸೋಮರಾಜು, ದಲಿತ ಸೇನೆ ಮಂಡ್ಯ ಜಿಲ್ಲಾಧ್ಯಕ್ಷ ಎನ್.ಜೆ. ಮಂಜು, ತಾಲ್ಲೂಕು ಅಧ್ಯಕ್ಷ ಚೌಡೇನಹಳ್ಳಿ ದೇವರಾಜು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕಮಲಾಕ್ಷಿ ನಾಗರಾಜು, ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಊಚನಹಳ್ಳಿ ನಟರಾಜು, ಗೌರವಾಧ್ಯಕ್ಷ ಸೋಮಸುಂದರ್, ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಷ್ಮೀಪುರ ರಂಗಸ್ವಾಮಿ ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ: ಶ್ರೀನಿವಾಸ್ ಆರ್.
