ಕೊರಟಗೆರೆ: ಕಾರ್ಯಕರ್ತರು ಹಾಗೂ ಅಭಿಮಾನಿಗಳ ಪ್ರೀತಿಗೆ ನಾನು ಚಿರಋಣಿ. ಯಾವುದೇ ಕಾರಣಕ್ಕೂ ಕ್ಷೇತ್ರವನ್ನು ಬಿಟ್ಟು ಹೊರಗೆ ಹೋಗುವುದಿಲ್ಲ ಎಂದು ಮಾಜಿ ಶಾಸಕ ಪಿ.ಆರ್. ಸುಧಾಕರ್ ಲಾಲ್ ಸ್ಪಷ್ಟಪಡಿಸಿದರು.
ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಯೋಜಿಸಿದ್ದ ತಮ್ಮ 58ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ಪಟ್ಟಣದ ಕಟ್ಟೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ 25 ಕೆ.ಜಿ. ತೂಕದ ಕೇಕ್ ಕತ್ತರಿಸಿ ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಹುಟ್ಟುಹಬ್ಬ ಆಚರಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರು, ‘ಮಾಜಿ ಶಾಸಕರು ಕ್ಷೇತ್ರವನ್ನು ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?’ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸುಧಾಕರ್ ಲಾಲ್, “ಇಂದು ನನ್ನ ಹುಟ್ಟುಹಬ್ಬ. ಈ ದಿನ ಈ ಮಾತು ಬೇಡ. ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟು ಹೊರಗೆ ಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಎಲ್ಲವನ್ನೂ ತಿಳಿಸುತ್ತೇನೆ,” ಎಂದು ಹೇಳಿದರು.
ಮಾಜಿ ಶಾಸಕರ ಈ ಹೇಳಿಕೆಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.
ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ
ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ಹಾಗೂ ಕಾರ್ಯಕರ್ತರ ವತಿಯಿಂದ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣುಗಳನ್ನು ವಿತರಿಸಲಾಯಿತು. ಸಾರ್ವಜನಿಕರಿಗೆ ಸಿಹಿ ಹಾಗೂ ತಿಂಡಿ ಹಂಚಿ, ಸುಧಾಕರ್ ಲಾಲ್ ಅವರಿಗೆ ಹೂಮಾಲೆ ಹಾಕಿ ಶುಭಾಶಯ ಕೋರಲಾಯಿತು. ಪಟ್ಟಣದ ಎಸ್ಎಸ್ಆರ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ಗಮನ ಸೆಳೆದ ನೋಟಿನ ಹಾರ
ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಯೊಬ್ಬರು ನೋಟುಗಳಿಂದ ತಯಾರಿಸಿದ ವಿಶೇಷ ಹಾರವನ್ನು ಸುಧಾಕರ್ ಲಾಲ್ ಅವರಿಗೆ ಹಾಕಿ ಶುಭ ಹಾರೈಸಿದರು. ಬಳಿಕ ಕೇಕ್ ಕತ್ತರಿಸುವ ಕಾರ್ಯಕ್ರಮದಲ್ಲೂ ಪಾಲ್ಗೊಂಡು ಸಂಭ್ರಮಿಸಿದರು.
ಜೆಡಿಎಸ್ ಮುಖಂಡ ಪ್ರಕಾಶ್ ಮಾತನಾಡಿ, “ಮಾಜಿ ಶಾಸಕ ಸುಧಾಕರ್ ಲಾಲ್ ಅವರು ಕ್ಷೇತ್ರದ ಜನರೊಂದಿಗೆ ಸದಾ ಇದ್ದಾರೆ. ಅಧಿಕಾರದಲ್ಲಿದ್ದಾಗಲೂ, ಇಲ್ಲದಿದ್ದಾಗಲೂ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅನೇಕ ಬಡವರಿಗೆ ವೈಯಕ್ತಿಕವಾಗಿ ನೆರವಾಗಿ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕಿಸಲು ಸಹಕರಿಸಿದ್ದಾರೆ. ಜನರ ಕುಟುಂಬದ ಕಾರ್ಯಕ್ರಮಗಳಿಗೂ ಮನೆ ಮಗನಂತೆ ಸ್ಪಂದಿಸುತ್ತಾರೆ,” ಎಂದರು.
ಜೆಡಿಎಸ್ ಮುಖಂಡ ರಮೇಶ್ ಮಾತನಾಡಿ, ಸುಧಾಕರ್ ಲಾಲ್ ಅವರ ಜನಪರ ಸೇವೆ ಹಾಗೂ ಕಾರ್ಯಕರ್ತರೊಂದಿಗಿನ ಆತ್ಮೀಯತೆಯೇ ಅವರ ದೊಡ್ಡ ಶಕ್ತಿ. ಜನರ ಪ್ರೀತಿ ಮತ್ತು ವಿಶ್ವಾಸ ಅವರೊಂದಿಗಿದೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ಶಶಿ ಮಾತನಾಡಿ, ಸಾಮಾನ್ಯ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ನಾಯಕ ಸುಧಾಕರ್ ಲಾಲ್. ಅವರ ಮೇಲಿನ ಕಾರ್ಯಕರ್ತರ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ ಎಂದರು.
ಜೆಡಿಎಸ್ ಮುಖಂಡ ಲಂಬು ರಾಜಣ್ಣ ಮಾತನಾಡಿ, ಕ್ಷೇತ್ರದ ಜನರೊಂದಿಗೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸಿರುವ ಸುಧಾಕರ್ ಲಾಲ್ ಅವರ ನಾಯಕತ್ವಕ್ಕೆ ಜನರ ಬೆಂಬಲವಿದೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಮಾತನಾಡಿ, “ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟು ಹೋಗುವುದಿಲ್ಲ ಎಂಬ ನಾಯಕನ ಹೇಳಿಕೆ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಮುಂದಿನ ದಿನಗಳಲ್ಲಿ ಅವರ ನೇತೃತ್ವದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲಾಗುವುದು,” ಎಂದರು.
ಈ ಸಂದರ್ಭದಲ್ಲಿ ಸ್ನೇಹಜೀವಿ ಪಿ.ಆರ್. ಸುಧಾಕರ್ ಲಾಲ್ ಅಭಿಮಾನಿ ಬಳಗದ ಹನುಮಂತಣ್ಣ, ದೇವರಾಜು, ರಮೇಶ್ ಬೈರಸಂದ್ರ, ನಾಗರಾಜು, ಮಾಜಿ ಅಧ್ಯಕ್ಷ ಸೀಗೇಪಾಳ್ಯ, ಪ್ರಕಾಶ್, ಬಸವರಾಜು, ಎಚ್.ವಿ. ಮಂಜಣ್ಣ, ನವೀನಕುಮಾರ್, ಸಂತೋಷ್, ಕಾಂತರಾಜು, ಸತೀಶ್, ಶಿವರಾಮು, ಸಾಕರಾಜ್, ಲಕ್ಷ್ಮಣ್, ಶ್ರೀಧರ್, ಎಚ್.ಆರ್. ವೆಂಕಟೇಶ್, ಕೆ.ಎನ್. ಹೇಮಂತ್, ನರಸಿಂಹರಾಜು, ಗೋವಿಂದರಾಜು, ರಾಜು ಬುಕ್ಕಾಪಟ್ಟಣ, ಕಾಂತರಾಜು ಥರಟಿ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
