ಹಾಸನ, ಆ.19: ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ, ಹಾಸನದ ಗಂಧದ ಕೋಠಿಯ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಾಗರಿಕ ಹಕ್ಕುಗಳ ಸಂರಕ್ಷಣಾ ವೇದಿಕೆ (ರಿ), ಹಾಸನ ಹಾಗೂ ಡಾ. ಗೊರೂರು ರಾಮಸ್ವಾಮಿ ಐಯಂಗಾರ್ ಸಾಹಿತ್ಯ ಪ್ರತಿಷ್ಠಾನ (ರಿ), ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ರಾಜಣ್ಣ ರಾಶಿ ಅವರ ‘1857 ಸ್ವಾತಂತ್ರ್ಯ ಸಂಗ್ರಾಮದಿಂದ ಉದಯಿಸಿದ ಭಾರತ’ ಕೃತಿ ಬಿಡುಗಡೆ ಹಾಗೂ ವಿಮರ್ಶೆ ಕಾರ್ಯಕ್ರಮವನ್ನು ಆ.27ರಂದು ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಗುರುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮವನ್ನು ಹಾಸನ ವಿಶ್ವವಿದ್ಯಾಲಯದ ಕುಲಸಚಿವರು (ಮೌಲ್ಯಮಾಪನ) ಡಾ. ನಾಗರಾಜ್ ಎನ್. ಉದ್ಘಾಟಿಸಲಿದ್ದಾರೆ. ಸಾಹಿತಿ ಗೊರೂರು ಅನಂತರಾಜು ಅವರು ವಾಸ್ತವಿಕ ನುಡಿ ನೆರವೇರಿಸಲಿದ್ದಾರೆ.

ನಿವೃತ್ತ ಆಂಗ್ಲ ಭಾಷಾ ಉಪನ್ಯಾಸಕ ಹಾಗೂ ಸಾಹಿತಿ ಗೊರೂರು ಶಿವೇಶ್ ಅವರು ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ನಿವೃತ್ತ ಉಪನ್ಯಾಸಕ ಹಾಗೂ ಲೇಖಕ ಡಾ. ಬರಾಳು ಶಿವರಾಮ, ಚನ್ನರಾಯಪಟ್ಟಣ ಅವರು ಕೃತಿಯ ವಿಮರ್ಶೆ ಮಾಡಲಿದ್ದಾರೆ.
ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಂಜಯ್ಯ ಡಿ.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ನಾಗರಿಕ ಹಕ್ಕುಗಳ ಸಂರಕ್ಷಣಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಸತ್ಯವತಿ ಹಾಗೂ ನಿವೃತ್ತ ಉಪವಿಭಾಗೀಯ ಅಧಿಕಾರಿ ಮತ್ತು ಕೃತಿಕಾರರಾದ ರಾಜಣ್ಣ ರಾಶಿ (ಶಂಕರಪ್ಪ ಹುಲ್ಲಂಗಾಲ) ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇತಿಹಾಸ, ಸ್ವಾತಂತ್ರ್ಯ ಹೋರಾಟ ಹಾಗೂ ಭಾರತದ ಉದಯದ ವಿವಿಧ ಆಯಾಮಗಳನ್ನು ಒಳಗೊಂಡಿರುವ ಕೃತಿಯ ಕುರಿತು ವಿಮರ್ಶೆ ನಡೆಯಲಿದ್ದು, ಸಾಹಿತ್ಯಾಸಕ್ತರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಯೋಜಕರು ತಿಳಿಸಿದ್ದಾರೆ.
