ಹಾಸನ, ಆ.24: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಬಳಿಕ ಹಾಸನ ಜಿಲ್ಲೆಯ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, 1,67,285 ಮತದಾರರ ಹೆಸರುಗಳನ್ನು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈ ಹಿಂದೆ 15,42,802 ಮತದಾರರು ಇದ್ದು, ಪರಿಷ್ಕರಣೆಯ ಬಳಿಕ 13,75,517 ಮತದಾರರ ಹೆಸರುಗಳು ಕರಡು ಪಟ್ಟಿಯಲ್ಲಿ ಉಳಿದಿವೆ. ಈ ಮೂಲಕ ಒಟ್ಟು ಮತದಾರರ ಸಂಖ್ಯೆ ಶೇ.89.16ಕ್ಕೆ ಇಳಿಕೆಯಾಗಿದೆ.
52 ಸಾವಿರಕ್ಕೂ ಹೆಚ್ಚು ಮಂದಿ ಮೃತರು
ಪಟ್ಟಿಯಿಂದ ಕೈಬಿಡಲಾದ 1,67,285 ಮತದಾರರ ಪೈಕಿ 52,022 ಮಂದಿ ಮೃತಪಟ್ಟಿರುವುದು, 73,964 ಮಂದಿ ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿರುವುದು, 13,616 ಡೂಪ್ಲಿಕೇಟ್ ಹೆಸರುಗಳು, 24,632 ಗೈರು ಮತದಾರರು ಹಾಗೂ 3,051 ಮಂದಿ ಇತರೆ ಕಾರಣಗಳಿಂದ ಪಟ್ಟಿಯಿಂದ ಹೊರಗಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಹಾಸನದಲ್ಲಿ ಅತಿ ಹೆಚ್ಚು ಹೆಸರುಗಳ ಕಡಿತ
ಕ್ಷೇತ್ರವಾರು ಅಂಕಿ-ಅಂಶಗಳ ಪ್ರಕಾರ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 47,032 ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ನಂತರ ಅರಕಲಗೂಡು 22,864, ಶ್ರವಣಬೆಳಗೊಳ 22,375, ಹೊಳೆನರಸೀಪುರ 21,559, ಬೇಲೂರು 19,092, ಸಕಲೇಶಪುರ 18,066 ಹಾಗೂ ಅರಸೀಕೆರೆ 16,297 ಹೆಸರುಗಳನ್ನು ಕೈಬಿಡಲಾಗಿದೆ.
ಮಹಿಳಾ ಮತದಾರರೇ ಹೆಚ್ಚು
SIR ಬಳಿಕ ಜಿಲ್ಲೆಯ ಕರಡು ಪಟ್ಟಿಯಲ್ಲಿ 6,80,925 ಪುರುಷರು ಹಾಗೂ 6,94,559 ಮಹಿಳಾ ಮತದಾರರು ಇದ್ದಾರೆ. ಹೀಗಾಗಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ.
79,778 ಮಂದಿಗೆ ನೋಟಿಸ್
ಜಿಲ್ಲೆಯಲ್ಲಿ 23,641 ‘ನೋ ಮ್ಯಾಚಿಂಗ್’ ಪ್ರಕರಣಗಳು ಹಾಗೂ 56,137 ಹೊಂದಾಣಿಕೆಯಾಗದ/ಪರಿಶೀಲನೆಗೆ ಒಳಪಟ್ಟ ಪ್ರಕರಣಗಳು ಸೇರಿದಂತೆ ಒಟ್ಟು 79,778 ಮತದಾರರಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ನೋಟಿಸ್ ಪಡೆದವರು ತಮ್ಮ ಹೆಸರು ಮತ್ತು ಮತದಾನದ ಹಕ್ಕನ್ನು ಸಮರ್ಥಿಸಿಕೊಳ್ಳಲು ಚುನಾವಣಾ ಆಯೋಗ ಸೂಚಿಸಿರುವ ಮಾನ್ಯ ದಾಖಲೆಗಳನ್ನು ಸಲ್ಲಿಸಬಹುದಾಗಿದೆ.
ಸೆ.23ರವರೆಗೆ ಹಕ್ಕು, ಆಕ್ಷೇಪಣೆಗೆ ಅವಕಾಶ
ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಹೆಸರು ಕೈಬಿಡಲಾಗಿದ್ದರೆ ಸೂಕ್ತ ದಾಖಲೆಗಳೊಂದಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
